ಬೆಳಗಾವಿ : ಕರ್ನಾಟಕದಲ್ಲಿ ಸುಮಾರು 5 ಲಕ್ಷ ಜನ, ದೇಶದಲ್ಲಿ ಸುಮಾರು 50 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ ಎಂದು ಡಬ್ಲೂ.ಹೆಚ್. ಓ ಹೇಳಿದೆ. ಆದರೆ ಸರ್ಕಾರ ಡಬ್ಲೂ.ಹೆಚ್. ಓ ಗೆ ಮಾಹಿತಿ ಇಲ್ಲ ಎಂದು ಯಾರೋ ಒಬ್ಬ ಅಧಿಕಾರಿಯ ಮೂಲಕ ಅವರ ಮಾತನ್ನು ತಿರಸ್ಕಾರ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸತ್ತವರ ಸಂಖ್ಯೆಯನ್ನು ಸುಳ್ಳು ಹೇಳುತ್ತಿವೆ. ಪ್ರಧಾನಿಗಳು, ಕೇಂದ್ರದ ಆರೋಗ್ಯ ಇಲಾಖೆ, ರಾಜ್ಯದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಮತ್ತು ಆರೋಗ್ಯ ಇಲಾಖೆ ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ ಎಂದು ಈ ಹಿಂದೆಯೇ ನಾನು ಹೇಳಿದ್ದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ದುರಂತ ಸಾವಿಗೀಡಾದವರ ಉದಾಹರಣೆ ನೀಡಿದ್ದೆ. ಸರ್ಕಾರ ಆಕ್ಸಿಜನ್ ಸಿಗದೆ ಸತ್ತವರು 3 ಜನ ಎಂದಿತ್ತು, ನಿಜವಾಗಿ ಸತ್ತವರು 39 ಜನ. ಆಗಲೇ ಸತ್ಯ ಗೊತ್ತಾಗಿತ್ತು. ಸಾಕಷ್ಟು ಜನ ಕೊರೊನಾ ಬಂದು ಸತ್ತು ಹೋದ ಮಾಹಿತಿ ನನಗಿದೆ. ನಮ್ಮೂರ ಅಕ್ಕಪಕ್ಕದಲ್ಲಿ ಹಲವಾರು ಜನ ಸತ್ತಿದ್ದಾರೆ, ಈ ಲೆಕ್ಕ ಸರ್ಕಾರದ ಬಳಿ ಇದೆಯೇ? ಹಾಗಾಗಿ ಕೊರೊನಾದಿಂದ ದೇಶದಲ್ಲಿ ನಿಜವಾಗಿ ಎಷ್ಟು ಜನ ಸತ್ತಿದ್ದಾರೆ ಎಂಬ ಬಗ್ಗೆ ಸಾವಿನ ಗಣತಿ ಆಗಬೇಕು ಮತ್ತು ಸತ್ತವರ ಕುಟುಂಬದವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ.
ಪ್ರಧಾನಮಂತ್ರಿಗಳು, ಆರೋಗ್ಯ ಸಚಿವರು, ಮುಖ್ಯಮಂತ್ರಿಗಳು ಜನರಿಗೆ ತಪ್ಪು ಮಾಹಿತಿ ನೀಡಿರುವುದರಿಂದ ದೇಶದ ಜನರ ಬಳಿ ಕ್ಷಮೆ ಕೇಳಬೇಕು.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವಾಗ ‘ದೆಹಲಿಯಿಂದ ಕೆಲವರು ಬಂದಿದ್ದರು, 2500 ಕೋಟಿ ರೂಪಾಯಿ ಕೊಟ್ಟರೆ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ, ಮಂತ್ರಿ ಆಗಲು 100 ಕೋಟಿ ಸಿದ್ಧ ಮಾಡಿಕೊಳ್ಳಿ ಎಂದಿದ್ದರು, ಆದರೆ ಇಷ್ಟು ಹಣ ನನ್ನ ಬಳಿ ಇರಲಿಲ್ಲ ಹಾಗಾಗಿ ಮುಖ್ಯಮಂತ್ರಿ, ಮಂತ್ರಿ ಆಗಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಇವರ ಬಳಿ ಹಣ ಕೇಳಿದವರು ಯಾರು? ಅವರನ್ನು ಕಳಿಸಿದ್ದು ಯಾರು? ಹಿಂದೆ ಯಡಿಯೂರಪ್ಪ ಎಷ್ಟು ದುಡ್ಡು ಕೊಟ್ಟು ಮುಖ್ಯಮಂತ್ರಿ ಆಗಿದ್ದರು? ಈಗಿನ ಮುಖ್ಯಮಂತ್ರಿಗಳು ಎಷ್ಟು ಕೊಟ್ಟಿದ್ದಾರೆ? ಮಂತ್ರಿಗಳು ಎಷ್ಟು ಕೊಟ್ಟಿದ್ದಾರೆ? ಈ ಎಲ್ಲವೂ ತನಿಖೆಯಾಗಿ ಸತ್ಯ ಗೊತ್ತಾಗಬೇಕು ಅಲ್ಲವೇ?
ಇಷ್ಟು ಹಣ ಕೇಳಲು ಅವರನ್ನು ಕಳಿಸಿದ್ದು ಯಾರು? ಬಿಜೆಪಿ ಅಧ್ಯಕ್ಷರು ಕಳಿಸಿದ್ರಾ? ಪ್ರಧಾನಿಗಳು ಕಳಿಸಿದ್ರಾ? ಅಮಿತ್ ಶಾ ಕಳಿಸಿದ್ರಾ? ಬೊಮ್ಮಾಯಿ ಅವರು ಎಷ್ಟು ದುಡ್ಡು ಕೊಟ್ಟು ಮುಖ್ಯಮಂತ್ರಿ ಆಗಿದ್ದಾರೆ? ಈ ಹಣ ಎಲ್ಲಿಂದ ಬಂತು? ಇದೆಲ್ಲ ಜನರಿಗೆ ಗೊತ್ತಾಗಬೇಕು. ಬಸವರಾಜ ಬೊಮ್ಮಾಯಿ ಅವರದು ಹಗರಣಗಳ ಸರ್ಕಾರ. ಬರೀ ಗೃಹ ಇಲಾಖೆಯಲ್ಲಿ ಮಾತ್ರವಲ್ಲ, ಯಾವ ಯಾವ ಇಲಾಖೆಗಳಲ್ಲಿ ನೇಮಕಾತಿ ನಡೆದಿದೆ, ಅಲ್ಲೆಲ್ಲಾ ಭ್ರಷ್ಟಾಚಾರ ನಡೆದಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು 7/6/2021 ರಲ್ಲಿ ಪ್ರಧಾನಿಗಳಿಗೆ ಪತ್ರ ಬರೆದು ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ, ಇಲ್ಲಿ ಕೆಲಸಗಳನ್ನು ಮಾಡಲು ಆಗುತ್ತಿಲ್ಲ ಎಂದು ದೂರಿದ್ದಾರೆ. ಈ ಪತ್ರ ಬರೆದು ವರ್ಷವಾಗುತ್ತಾ ಬಂದಿದೆ, ಮೋದಿ ಅವರು ಏನು ಕ್ರಮ ಕೈಗೊಂಡರು? ನಾನು ತಿನ್ನುವುದಿಲ್ಲ, ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳುವ ಪ್ರಧಾನಿಗಳು ತನಿಖೆ ಮಾಡಿಸಬೇಕಿತ್ತು ಅಲ್ಲವೇ?
ನಾನು ತನಿಖೆಗೆ ಒತ್ತಾಯ ಮಾಡಿದರೆ ಗಾಳಿಯಲ್ಲಿ ಗುಂಡು ಹೊಡೆಯುತ್ತೇನೆ, ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎನ್ನುತ್ತಾರೆ. ಪಿ.ಎಸ್.ಐ ನೇಮಕಾತಿ ಪರೀಕ್ಷೆ ಯಾಕಪ್ಪ ರದ್ದು ಮಾಡಿದ್ದು? ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ ಎಂದಾಗಿದ್ದರೆ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶ ಮಾಡುವ ಅಗತ್ಯ ಏನಿತ್ತು? ಪಶು ಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಪಿ.ಎಸ್.ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗಿದೆ, ಲೀಸ್ಟ್ ರದ್ದು ಮಾಡಿ ಎಂದು ಹೇಳಿದ್ದಾರೆ. ಅವರ ಪತ್ರಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ. ಪರಿಷತ್ ಸದಸ್ಯರಾದ ಸಂಕನೂರ್, ಎಸ್. ರವಿ, ಯು.ಬಿ ವೆಂಕಟೇಶ್ ಅವರು ಅಕ್ರಮದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಯಾವ ಅಕ್ರಮಗಳು ನಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೀಗೆ ಉತ್ತರಿಸಿದರೆ ಅವರಿಗೆ ತಮ್ಮ ಹುದ್ದೆಯಲ್ಲಿ ಮುಂದುವರೆಯುವ ಯಾವ ನೈತಿಕತೆ ಇದೆ? ತಮ್ಮದೇ ಪಕ್ಷದವರಿಗೆ ಈ ರೀತಿ ತಪ್ಪು ಮಾಹಿತಿ ನೀಡಿದರೆ ಹೇಗೆ? ಅಶ್ವಥ್ ನಾರಾಯಣ ಅವರದ್ದು ಬೇರೆ ಭ್ರಷ್ಟಾಚಾರದ ಕಥೆಯಿದೆ. ಸರ್ಕಾರಕ್ಕೆ ಮಾನ ಮರ್ಯಾದಿ ಇದ್ದರೆ ಈ ಇಬ್ಬರೂ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಬೇಕು. ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ನನ್ನ ಕರ್ತವ್ಯ. ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರಲು ಆಗಲ್ಲ.
ಈ ಸರ್ಕಾರದ ಅವಧಿಯಲ್ಲಿ ಪೊಲೀಸರೆ ಕಳ್ಳರಾಗಿದ್ದಾರೆ. ಎಡಿಜಿಪಿ ಅಮೃತ್ ಪೌಲ್, ಡಿವೈಎಸ್‌ಪಿ ಶಾಂತಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗದೆ ಇದ್ದರೆ ವರ್ಗಾವಣೆ ಮಾಡುತ್ತಿದ್ದರ? ಕೆಲವು ಇನ್ಸ್ ಪೆಕ್ಟರ್ ಗಳನ್ನು ಬಂಧಿಸಲಾಗಿದೆ. ಬೇಲಿಯೇ ಎದ್ದು ಹೊಲ ಮೇಯಲು ಆರಂಭವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದವನು, 5 ಪೈಸೆ ಖರ್ಚಿಲ್ಲದೆ ಮುಖ್ಯಮಂತ್ರಿ ಆಗಿದ್ದೆ. ಯಾರಿಗೂ ಒಂದು ಕಾಫಿ ಸಹ ಕುಡಿಸಿಲ್ಲ, ಶಾಸಕಾಂಗ ಸಭೆಯಲ್ಲಿ ನಿರ್ಧಾರ ಮಾಡಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದರು. ಯತ್ನಾಳ್ ಅವರನ್ನು ಕಾಂಗ್ರೆಸ್ ನವರು ಮುಖ್ಯಮಂತ್ರಿ ಮಾಡಲು ಆಗುತ್ತಾ? ಬಿಜೆಪಿಯವರೇ ಮಾಡಬೇಕು. ಹಾಗಾಗಿ 2500 ಕೋಟಿ ರೂಪಾಯಿ ಅವರ ಪಕ್ಷದವರೇ ಕೇಳಿರುತ್ತಾರೆ. ಸರ್ಕಾರದ ಭ್ರಷ್ಟಾಚಾರದ ಮಾಹಿತಿ ನೀಡಿದವರಿಗೆಲ್ಲ ಸಿಐಡಿ ನೋಟಿಸ್ ಕೊಟ್ಟರೆ ಹೇಗೆ? ಕ್ರಿಮಿನಲ್ ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಪಿ.ಎಸ್.ಐ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು ಭಾಗಿಯಾಗಿರುವುದರಿಂದ ಸಿಐಡಿ ತನಿಖೆ ಮೇಲೆ ಪ್ರಭಾವ ಬೀರುತ್ತಾರೆ. ತನಿಖೆಯನ್ನು ಪೊಲೀಸರೆ ಮಾಡಲಿ ಆದರೆ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯಾಗಬೇಕು. ಅಶ್ವಥ್ ನಾರಾಯಣ ಸಂಬಂಧಿಯನ್ನು ವಿಚಾರಣೆಗೆ ಕರೆದು ಬಿಟ್ಟು ಕಳಿಸಿದ್ದು ಯಾಕೆ? ಉಳಿದವರ ಬಂಧನವಾಗಿದೆ, ಇವರನ್ನು ಏಕೆ ಬಂಧಿಸಿಲ್ಲ? ಅಶ್ವಥ್ ನಾರಾಯಣ ಅವರ ಶಿಫಾರಸ್ಸಿನ ಮೇಲೆ ಬಿಟ್ಟು ಕಳಿಸಿದ್ದಾರೆ.
ಸರ್ಕಾರದ ಹಸ್ತಕ್ಷೇಪ ಇಲ್ಲದೆ ಇಂಥ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಪೊಲೀಸರ ಜೊತೆ ರಾಜಕಾರಣಿಗಳು ಸೇರಿ ಅಕ್ರಮ ಎಸಗಲಾಗಿದೆ. ಹಾಗಾಗಿ ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ. ಡಿ.ಕೆ ಸುರೇಶ್ ಅವರು ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು ತಪ್ಪು ಯಾರು ಮಾಡಿದರೂ ತಪ್ಪೇ, ನಾನೇ ಮಾಡಿದ್ರೂ ತಪ್ಪೆ. ಆರೋಪ ಮಾಡಿದ ಮಾತ್ರಕ್ಕೆ ಅದು ಸತ್ಯ ಆಗಲ್ಲ. ತನಿಖೆ ನಡೆಸಿ ಸತ್ಯ ಏನೆಂದು ಗೊತ್ತಾಗಲಿ. ಕುಮಾರಸ್ವಾಮಿ ಅವರ ಮಾತುಗಳಿಗೆ ನಾನು ಉತ್ತರ ನೀಡಲ್ಲ, ಕಾರಣ ಅವರು ಸದಾ ಸುಳ್ಳು ಹೇಳುತ್ತಾರೆ. ರಾಮ್ ರಾವ್ ಅವರು ಗೃಹ ಸಚಿವರಾಗಿದ್ದ ವೇಳೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಯಾರೇ ಆದರೂ ನೈತಿಕತೆಗೆ ತಲೆ ಬಾಗಲೇಬೇಕು. ರಾಜ್ಯ ಸರ್ಕಾರದ ಭ್ರಷ್ಟಾಚಾರ, 40% ಕಮಿಷನ್, ಇಲಾಖರಗಳ ಅಕ್ರಮಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ನಾವು ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಅನುದಾನ ಬಿಟ್ಟರೆ ಈ ಸರ್ಕಾರದ ಅವಧಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನರೇಂದ್ರ ಮೋದಿ ಅವರು ಹೀಗೆ ಗ್ಯಾಸ್ ಬೆಲೆ ಏರಿಕೆ ಮಾಡಿದರೆ ಜನ ಗ್ಯಾಸ್ ಬಿಟ್ಟು ಸೌದೆ ಒಲೆಗೆ ಮರಳಿ ಬರುತ್ತಾರೆ. ಕೊರೊನಾ ಸಂದರ್ಭದಲ್ಲಿ ಜನರ ಮೇಲೆ ಬೆಲೆ ಏರಿಕೆ ಭಾರ ಹಾಕಬೇಡಿ ಎಂದು ಮನವಿ ಮಾಡುತ್ತಲೇ ಬಂದಿದ್ದೇವೆ. ಇದು ದಪ್ಪ ಚರ್ಮದ ಸರ್ಕಾರ, ನಮ್ಮ ಮಾತಿಗೆ ಕಿವಿ ಕೊಡುತ್ತಿಲ್ಲ, ನಾವಾದರೂ ಏನು ಮಾಡೋದು?