ಬೆಂಗಳೂರು : ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ಸಿಗುತ್ತಿದೆಯೋ ಅಷ್ಟೇ ಮಹತ್ವ ಮಾನಸಿಕ ಆರೋಗ್ಯಕ್ಕೂ ಸಿಗಬೇಕು ಆಧುನಿಕ ಜೀವನ ಶೈಲಿಯಿಂದ ಜನರು ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸಲು ಕರ್ನಾಟಕ ಸರ್ಕಾರ ಹಾಗೂ ಆರೋಗ್ಯ ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಗುಜರಾತ್ನ ಕೆವಾಡಿಯಾದಲ್ಲಿ 14ನೇ ಆವೃತ್ತಿಯ ಸೆಂಟ್ರಲ್ ಹೆಲ್ತ್ ಕೌನ್ಸಿಲ್ ಆಫ್ ಹೆಲ್ತ್ ಅಂಡ್ ಫ್ಯಾ ಮಿಲಿ ವೆಲ್ ಫೇರ್ ನಡೆಸುತ್ತಿರುವ “ಸ್ವಾಸ್ಥ್ಯ ಚಿಂತನ್ ಶಿವಿರ್” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಕರ್ನಾಟಕ ಮಾದರಿ ವ್ಯವಸ್ಥೆಯನ್ನು ಜಾರಿ ಮಾಡಿದೆ. ಮಾನಸಿಕ ಆರೋಗ್ಯದ ಕೊರತೆ ದೈಹಿಕ ಆರೋಗ್ಯದ ಮೇಲೆ ಪ್ರಬಾವ ಬೀರುತ್ತದೆ. ಹೀಗಾಗಿ ಸರ್ಕಾರ “ಇ ಮನಸ್” ಸೇರಿದಂತೆ ಹಲವು ವಿವಿಧ ಯೋಜನೆಗಳ ಮೂಲಕ ಜನರ ಮಾನಸಿಕ ಆರೋಗ್ಯವನ್ನು ಗಟ್ಟಿಮಾಡಲು ಶ್ರಮಿಸುತ್ತಿದೆ ಎಂದರು.
ಕೋವಿಡ್ ಆರಂಭ ಕಾಲದಲ್ಲಿ, ‘ಪಾಸಿಟಿವ್’ ಎಂಬ ವರದಿಯನ್ನು ನೋಡಿಯೇ ವಿನಾಕಾರಣ ಆತಂಕಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಉದಾಹರಣೆ ಇದೆ. ಹಾಗೆಯೇ 100 ವರ್ಷ ಮೇಲ್ಪಟ್ಟ ವೃದ್ಧರು ಯಶಸ್ವಿಯಾಗಿ ಕೊರೊನಾ ಗೆದ್ದು ಬಂದ ಅಚ್ಚರಿಯ ಘಟನೆಗಳೂ ಇವೆ. ಮಾನಸಿಕ ಆರೋಗ್ಯ ಇಡೀ ದೇಹದ ಒಟ್ಟು ಆರೋಗ್ಯದ ಸುಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕೊರೊನಾ ಸಮಯದಲ್ಲಿ ಟೆಲಿ ಕೌನ್ಸೆಲಿಂಗ್ ಮೂಲಕ ಸುಮಾರು 27 ಲಕ್ಷ ಜನರಿಗೆ ಆತ್ಮವಿಶ್ವಾಸ ತುಂಬಲಾಗಿದೆ. ಸರ್ಕಾರ, ನಿಮ್ಹಾನ್ಸ್ ಸಂಸ್ಥೆಯ ಜೊತೆ ಸೇರಿಕೊಂಡು ಟೆಲಿ ಕೌನ್ಸಲಿಂಗ್ ಮತ್ತು ಟೆಲಿ ಮಾನಿಟರಿಂಗ್ ಮೂಲಕ ಡಿಜಿಟಲ್ ವ್ಯವಸ್ಥೆಯಲ್ಲಿ ಮಾನಸಿಕ ಆರೋಗ್ಯ ಕ್ಷೇಮವನ್ನು ಹೆಚ್ಚಿಸಲು ಕ್ರಮ ಕೈಗೊಂಡಿತ್ತು ಎಂದು ಹೇಳಿದರು. ಕರ್ನಾಟಕದಲ್ಲಿ ಇ ಮನಸ್, ಮನೋ ಚೈತನ್ಯ ಕ್ಲಿನಿಕ್, ಮಾತೃ ಚೈತನ್, ಧವಾ ಅಂಡ್ ಧುವಾ ಹೀಗೆ ಹಲವು ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿದೆ. ಈ ಮೂಲಕ ವಿವಿಧ ರೀತಿಯ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರಿಗೆ ವಿವಿಧ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನೇಕರು ಮಾನಸಿಕ ರೋಗಗಳಿಂದ ಬಳಲುತ್ತಿದ್ದರೂ ಅದನ್ನು ಒಂದು ರೋಗ ಎಂದು ಗುರುತಿಸುವುದಿಲ್ಲ. ಇನ್ನೂ ಕೆಲವರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರಪಡುತ್ತಾರೆ. ಈ ಸವಾಲುಗಳನ್ನು ನಿವಾರಿಸಿ ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರ ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ, ಆಪ್ತ ಸಮಾಲೋಚನೆ ಸೇವೆ ನೀಡಲಾಗುತ್ತಿದೆ ಎಂದರು.
ಕರ್ನಾಟಕ ಮಾನಸಿಕ ಆರೋಗ್ಯ ನಿರ್ವಹಣಾ ವ್ಯವಸ್ಥೆ (ಇ-ಮನಸ್) ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಾಗಿದೆ. ಈ ವೆಬ್ ವ್ಯವಸ್ಥೆಯು, ಮಾನಸಿಕ ಅಸ್ವಸ್ಥತೆಯ ಆರೈಕೆ ಪಡೆಯಲು ಬಯಸುವ ವ್ಯಕ್ತಿಯ ಮೂಲ ವೈದ್ಯಕೀಯ ದಾಖಲೆಯನ್ನು ನಿರ್ವಹಣೆ ಮಾಡುತ್ತದೆ. ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿ, ಸಾರ್ವಜನಿಕ ಹಾಗೂ ಖಾಸಗಿ ಮಾನಸಿಕ ಆರೋಗ್ಯ ಸಂಸ್ಥೆಗಳು ಸೇರಿದಂತೆ ಮಾನಸಿಕ ಆರೋಗ್ಯ ವಲಯದ ಎಲ್ಲಾ ಪಾಲುದಾರರನ್ನು ಒಂದುಗೂಡಿಸುವ ವೇದಿಕೆ ಇದಾಗಿದೆ. ಇಂಟರ್ ವೆನ್ಷನ್, ಇಂಟಗ್ರೇಶನ್, ಇಂಪ್ಲಿಮೆಂಟೇಶನ್, ಇನ್ನೋವೇಶನ್ ಮತ್ತು ಇನ್ವೆಸ್ಟ್ ಮೆಂಟ್ ಮೂಲಕ ಸರ್ಕಾರ ಜನರ ಆರೋಗ್ಯದ ಸುಧಾರಣೆಗೆ ವಿಶೇಷ ಕಾಳಜಿ ವಹಿಸುತ್ತಿದೆ ಎಂದರು. ಸ್ವಾಸ್ಥ್ಯ ಚಿಂತನ್ ಸಮ್ಮೇಳನದಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಡಾ. ಮನ್ಸೂಖ್ ಮಾಂಡಾವಿಯಾ, ವಿವಿಧ ರಾಜ್ಯದ ಆರೋಗ್ಯ ಸಚಿವರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.