ಬೆಂಗಳೂರು : ಯುವಜನತೆ ದೇಶದ ಆಧಾರಸ್ತಂಭವಾಗಿದ್ದು, ದೇಶದ ಹಿತಕ್ಕಾಗಿ ಮತ್ತು ಜನರ ಹಿತಕ್ಕಾಗಿ ಪದವಿ ಬಳಿಕ ಆಚಾರ,ವಿಚಾರ ಮತ್ತು ಸಂಸ್ಕೃತಿಯಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಳ್ಳವ ಮೂಲಕ ಜ್ಞಾನವನ್ನು ದೇಶಕ್ಕಾಗಿ ಸಮರ್ಪಿಸಿಕೊಳ್ಳಿ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ಬೆಂಗಳೂರು ವಿಶ್ವವಿದ್ಯಾಲಯದ 56ನೇ ಘಟಿಕೋತ್ಸವಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿ ಮಾತನಾಡಿದರು.
ಹೊಸ ಆಲೋಚನೆಗಳು, ಸಹಯೋಗ ಮತ್ತು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ, ಸಮಯದ ನಿರ್ಣಾಯಕ ಸವಾಲುಗಳನ್ನು ಎದುರಿಸುವ ಉತ್ಸಾಹ ಮತ್ತು ಧೈರ್ಯವನ್ನು ಯುವಜನತೆ ಹೊಂದಿದ್ದಾರೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದ ಸಂಸ್ಕøತಿ, ಸಭ್ಯತೆಗೆ ವಿಶ್ವದಲ್ಲಿ ಉನ್ನತ ಸ್ಥಾನವಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡ್ಯೂವ ಮೂಲಕ ಆತ್ಮ ನಿರ್ಭರ್ ಭಾರತ ಮತ್ತು ಸದೃಢ ಭಾರತ ನಿರ್ಮಿಸುವ ಜವಾಬ್ದಾರಿ ಯುವ ಪೀಳಿಗೆಗಳ ನಿಮ್ಮ ಮೇಲಿದೆ ಎಂದರು. ಈ ವಿಶ್ವವಿದ್ಯಾನಿಲಯದಿಂದ ಪಡೆದ ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮುನ್ನಡೆಯಲು ನಿಮಗೆ ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣವನ್ನು ತಲುಪಲು, ವಿಸ್ತರಿಸಲು ಮತ್ತು ಉತ್ಕೃಷ್ಟತೆಯನ್ನು ಒದಗಿಸಲು ಪ್ರತ್ನಿಸುತ್ತಿದೆ. ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ಅನೇಕ ಮಹನೀಯರು ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹಾನ್ ನಾಯಕರಾಗಿ ಹೊಮ್ಮಿದ್ದಾರೆ. ಅನೇಕ ಸಾಧಕರನ್ನು ಸಮಾಜಕ್ಕಾಗಿ ಕೊಡುಗೆ ನೀಡಿರುವ ಈ ವಿಶ್ವವಿದ್ಯಾಲಯದ ಕಾರ್ಯವೈಖರಿ ಶ್ಲಾಘನೀಯ. ಈ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ, ತಮ್ಮ ಸಾಧನೆಗಳ ಮೂಲಕ ಭಾರತ ರತ್ನ ಸೇರಿದಂತೆ ಅನೇಕ ಪ್ರಶಸ್ತಿ ಪಡೆದ ಮಹನೀಯರನ್ನು ಇಂದಿನ ವಿದ್ಯಾರ್ಥಿಗಳು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದರು.ಇಸ್ಕಾನ್ ಅಧ್ಯಕ್ಷರಾದ ಮಧುಪಂಡಿತ್ ದಾಸ್, ಕಲಾವಿದರಾದ ಶ್ರೀ ಎಸ್ ಜಿ ವಸುದೇವ್, ಸಾಮಾಜಿಕ ಕಾರ್ಯಕರ್ತ ಹಾಗೂ ಕಲವಿದರಾದ ಶ್ರೀ ಎಂ ಎಸ್ ಮುತ್ತುರಾಜ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ, ಅಭಿನಂದಿಸಿದರು.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC)ನಿರ್ದೇಶಕರಾದ ಡಾ.ಎಸ್ ಸಿ ಶರ್ಮಾ ಅವರು ಘಟಿಕೋತ್ಸವದ ಭಾಷಣ ಮಾಡಿದರು. ಪದವಿ ಮತ್ತು ಸ್ನಾತಕೋತರ ವಿದ್ಯಾರ್ಥಿಗಳಿ ಪದವಿ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಕುಲಪತಿಗಳಾದ ವೇಣುಗೋಪಾಲ್ ಕೆ ಆರ್, ಕುಲಸಚಿವರಾದ ಪ್ರೋ.ಎಂ ಕೋಟ್ರೇಶ್, ಸಿಂಡಿಕೇಟ್ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.