ರಾಮನಗರ : ಕುಟುಂಬ ಮತ್ತು ವಂಶಪಾರಂಪರ್ಯ ಪಕ್ಷವಲ್ಲದ ಏಕೈಕ ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸೂಕ್ತ ಸ್ಥಾನ ಸಿಗಬೇಕೆಂದು ನಮ್ಮ ಪಕ್ಷದ ಸಿದ್ದಾಂತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದರು. ನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಕೃತಿಯ ಸಂಪತ್ತನ್ನು ಲೂಟಿ ಹೊಡೆದವರು ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದ್ದು, ಅವರನ್ನು ರಾಜಕೀಯದಿಂದ ಕಿತ್ತೆಸೆಯುವ ಕೆಲಸ ಮಾಡಬೇಕು ಎಂದು ಡಿಕೆ ಬ್ರದರ್ಸ್ ಹೆಸರನ್ನು ಏಳದೆ ಕಿಡಿಕಾರಿದರು. ನಾಲ್ಕು ತಾಲೂಕುಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು, ಅದಕ್ಕಾಗಿ ನಾವು ಮಾಡಬೇಕಾದ ಕೆಲಸಕ್ಕೆ ಸಮಿತಿ ರಚನೆ ಮಾಡಿ ಅಣಿಗೊಳಿಸುವ ಕೆಲಸ ಮಾಡೋಣ ಆಗ ಎಲ್ಲರೂ ಗಟ್ಟಿಯಾಗಿ ನಿಲ್ಲಲು ಸಾಧ್ಯ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ಪಂಚರಾಜ್ಯ ಚುನಾವಣೆಯಲ್ಲಿ ಜನರು ಬಿಜೆಪಿಗೆ ನೀಡಿದ ಬೆಂಬಲ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಜನರು ಬಿಜೆಪಿ ಪರ ನಿಲ್ಲುವುದು ಸ್ಪಷ್ಟ ಸೂಚನೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಪ್ರತಿಮನೆಗೆ ಕುಡಿಯುವ ನೀರು, ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಜಿಲ್ಲಾಸ್ಪತ್ರೆ ಉನ್ನತೀಕರಣ, ಐಟೆಕ್ ರೇಷ್ಮೆ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕದಂತಹ ಹತ್ತು ಹಲವು ಜನಪರವಾದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರ.
ಪಕ್ಷ ಸಂಘಟನೆ ಏನು ಎಂಬುದನ್ನು ರಾಜ್ಯಕ್ಕೆ ತೋರಿಸಬೇಕಾಗಿದೆ. ಎಲ್ಲರೂ ವ್ಯಕ್ತಿ ನಿಷ್ಟೆ ಬಿಟ್ಟು, ಪಕ್ಷ ನಿಷ್ಟೆಯಿಂದ ಮಾಡಬೇಕು. ನಿಮ್ಮೊಂದಿಗೆ ಸದಾ ನಾನು ದುಡಿಯುತ್ತೇನೆ ಎಂದರು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಾತನಾಡಿ, ಚುನಾವಣಾ ಹೊಸ್ತಿಲಲ್ಲಿ ನಡೆಯುತ್ತಿರುವ ಈ ಕಾರ್ಯಕಾರಿಣಿ ಸಭೆ ಹೆಚ್ಚು ಮಹತ್ವ ಪಡೆದಿದೆ. ನಾಲ್ಕು ತಾಲೂಕುಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ರಾಜ್ಯಾದ್ಯಂತ ಬೇರೆ ಪಕ್ಷದ ಮುಖಂಡರು ನಮ್ಮ ಪಕ್ಣದ ಕಡೆ ಕರೆತರುವ ಕೆಲಸ ಮಾಡಲಾಗುತ್ತಿದ್ದು, ಅದರ ಭಾಗವಾಗಿ ರಾಮನಗರ ಜಿಲ್ಲೆಯಲ್ಲಿ ಪಕ್ಷ ಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಮುಖಂಡರು ಪಕ್ಷದ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಜೆಡಿಎಸ್ ಪಕ್ಷದ ಜನತಾ ಜಲಧಾರೆಗೆ ಜಿಲ್ಲೆಯಲ್ಲಿ ಸ್ಪಂದನೆ ಸಿಗುತ್ತಿಲ್ಲ. ಇದು ಅವರಿಗೆ ನಿರಾಸದಾಯಕವಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮಜೊತೆ ತೊಡಗಿಸಿಕೊಂಡರೆ ನಮ್ಮ ತಯಾರಿ ಯಶಸ್ವಿಯಾಗಲಿದೆ ಎಂದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ. ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಸಂಘಟಿಸಿ ಎಂದು ಕರೆಕೊಟ್ಟರು.
ಜಿಲ್ಲಾ ಪ್ರಭಾರಿ, ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಉತ್ತಮ ಅವಕಾಶಗಳಿವೆ. ನಾವು ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಿದಾಗ ಮಾತ್ರ ಸಂಘಟನೆ ಸಾದ್ಯ ಎಂದರು. ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಅಧಿಕಾರ ಇರಲಿ, ಇಲ್ಲದಿರಲಿ ನಮ್ಮ ಪಕ್ಷದಲ್ಲಿ ಶಿಸ್ತು ಬದ್ದವಾಗಿ ಇಂತಹ ಸಭೆಗಳು ನಡೆದು ಪಕ್ಷ ಸಂಘಟಿಸುವ ಕೆಲಸ ಮಾಡಲಾಗುತ್ತದೆ. ಮೈಸೂರು ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು. ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ವೀಣಾ, ಪ್ರಭಾರಿ ಕಾಂತರಾಜು, ಮುಖಂಡರಾದ ಜಯಣ್ಣ, ಪ್ರಸಾದ್ ಗೌಡ, ಗೌತಮ್ ಗೌಡ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ರುದ್ರದೇವರು, ರಾಜೇಶ್, ಮಾಧ್ಯಮ ಪ್ರಮುಖ ಚಂದ್ರಶೇಖರರೆಡ್ಡಿ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ್ಯ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.