ಹುಬ್ಬಳ್ಳಿ : ಏಪ್ರಿಲ್ 27 ರಂದು ಪ್ರಧಾನ ಮಂತ್ರಿ ರಾಷ್ಟ್ರದ ಕೋವಿಡ್ ಪರಿಸ್ಥಿತಿ ಹಾಗೂ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ಕರೆದಿದ್ದಾರೆ ಎಂದು ಮುಖ್ಯಮಂತ್ರಿ. ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿಯ ವಿಮಾನನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಕೋವಿಡ್ ಬಗ್ಗೆ ಜಾಗೃತರಾಗಿರುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆಯನ್ನು ಕೊಟ್ಟಿದೆ. ಕಳೆದ 8-10 ದಿನಗಳಿಂದ ಅಲ್ಪಮಟ್ಟದ ಪ್ರಕರಣಗಳು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಮೂರು ಅಲೆಗಳನ್ನು ನಿಭಾಯಿಸಿರುವ ಅನುಭವದಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನುವ ಮಾತನ್ನು ಪರಿಣಿತರು ಹೇಳಿದ್ದಾರೆ. ಈಗಾಗಲೇ ಆರೋಗ್ಯ ಸಚಿವರೂ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಎಪ್ರಿಲ್ 27 ರಂದು ಪ್ರಧಾನ ಮಂತ್ರಿಗಳ ವೀಡಿಯೋ ಸಂವಾದದ ನಂತರ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇವೆ ಎಂದರು.
ಜನ ಜಾಗೃತರಾಗಿರಬೇಕು : ಜನರು ಜಾಗೃತರಾಗಿರುವುದು ಬಹಳ ಮುಖ್ಯ. ಕೋವಿಡ್ 2 ನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆ ಯಲ್ಲಿ ಪ್ರಾರಂಭವಾಗಿ ನಂತರ ಉಲ್ಬಣವಾಯಿತು. ಈಗಾಗಲೇ ವಿಜ್ಞಾನಿಗಳು ಯಾವ ಮಾದರಿಯಲ್ಲಿದೆ ಎಂದು ಪರೀಕ್ಷಿಸುತ್ತಿದ್ದಾರೆ ಎಂದರು.