ಬೆಂಗಳೂರು,ಮಾ,26 : ವಿಕಲಚೇತನರಿಗಾಗಿ ಶ್ರೀ ಬಸವ ಇಂಟರ್ ನ್ಯಾಷನಲ್ ಫೌಂಡೇಶನ್, ಕರ್ನಾಟಕ ವೀಲ್ ಚೇರ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಮತ್ತು ಬೆಳಗಾವಿ ಜಿಲ್ಲಾ ವಿಕಲಚೇತನರ ಕ್ರೀಡಾಸಂಘಗಳು ಪ್ರಾಯೋಜಿಸಿರುವ `ಎಸ್.ಆರ್.ಬೊಮ್ಮಾಯಿ ಮತ್ತು ನಟ ಡಾ.ಪುನೀತ್ ರಾಜಕುಮಾರ್ ಸ್ಮಾರಕ’ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ಚಾಲನೆ ನೀಡಿದರು. ಮಲ್ಲೇಶ್ವರಂ 15ನೇ ಅಡ್ಡರಸ್ತೆಯಲ್ಲಿರುವ ಬೇಗಲ್ಸ್ ಬ್ಯಾಸ್ಕೆಟ್ ಬಾಲ್ ಕ್ಲಬ್ ನಲ್ಲಿ ಏರ್ಪಡಿಸಿರುವ ಈ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ವಿಕಲಚೇತನರಿಗೆ ಸರಕಾರಿ ಹುದ್ದೆಗಳಲ್ಲಿ ಶೇ.5ರಷ್ಟು ಮೀಸಲು ನೀಡಲು ಸರಕಾರ ಉತ್ಸುಕವಾಗಿದೆ ಎಂದರು. ವಿಕಲಚೇತನರು ಸಾಮಾನ್ಯರಿಗಿಂತ ವಿಶಿಷ್ಟವಾದ ದೈಹಿಕ ಸಾಮರ್ಥ್ಯವನ್ನು ಹೊಂದಿದ್ದು, ಅಪಾರ ಪ್ರತಿಭೆಯನ್ನು ಹೊಂದಿರುತ್ತಾರೆ. ಅವರಿಗೆ ಕೂಡ ಉಳಿದ ಸಾಮಾನ್ಯರಂತೆಯೇ ಎಲ್ಲ ಹಕ್ಕುಗಳು ಮತ್ತು ಸೌಲಭ್ಯಗಳು ಸಿಕ್ಕುವಂತೆ ಸಮಾಜವು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕ್ರೀಡಾ ಚಟುವಟಿಕೆಗಳಿಂದ ಸಿಗುವ ಉಲ್ಲಾಸಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಅದರಲ್ಲೂ ವಿಕಲಚೇತನರು ತಮ್ಮ ದೈಹಿಕ ಮಿತಿಗಳನ್ನು ಮರೆತು, ಬ್ಯಾಸ್ಕೆಟ್-ಬಾಲ್ ತರಹದ ಕ್ರೀಡೆಗಳಲ್ಲಿ ಸಕ್ರಿಯರಾಗುವುದು ಅವರ ಸಬಲೀಕರಣದತ್ತ ಇಡುವ ಹೆಜ್ಜೆಯಾಗಿರುತ್ತದೆ ಎಂದು ಅವರು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹಿರಿಯ ಬ್ಯಾಸ್ಕೆಟ್ ಬಾಲ್ ಆಟಗಾರ `ಪದ್ಮಶ್ರೀ’ ವೆಂಕಟೇಶ್, ಸುರೇಶ್ ಯಾದವ್, ಪಂಕಜಾ ರವಿಶಂಕರ್, ದಿವ್ಯಾ ರಾಮಚಂದ್ರ ಶೆಟ್ಟಿ, ಅಪ್ಪು ಯುವ ಬ್ರಿಗೇಡ್ ಸಂಘಟನೆಯ ಮಾರುತಿ, ಬೀಗಲ್ಸ್ ದೀಪಕ್ ಮುಂತಾದವರು ಉಪಸ್ಥಿತರಿದ್ದರು. 45 ಮಂದಿಗೆ ತಲಾ 1 ಲಕ್ಷ ಮಲ್ಲೇಶ್ವರದ ರೋಟರಿ ಸಭಾಂಗಣದಲ್ಲಿ ನಡೆದ ಪ್ರತ್ಯೇಕ ಸಮಾರಂಭದಲ್ಲಿ ಕೊರೋನಾದಿಂದಾಗಿ ಮೃತಪಟ್ಟ 45 ಮಂದಿಯ ಕುಟುಂಬದ ವಾರಸುದಾರರಿಗೆ ತಲಾ 1 ಲಕ್ಷ ರೂ. ಪರಿಹಾರಧನವನ್ನೂ ಸಚಿವ ಅಶ್ವತ್ಥನಾರಾಯಣ ವಿತರಿಸಿದರು.