ಹುಬ್ಬಳ್ಳಿ, ಮಾರ್ಚ್ 26: ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಕಾರ್ಯಾದೇಶಗಳನ್ನು ಹೊರಡಿಸಿ ಘೋಷಿತ ಯೋಜನೆಗಳ ಪರಿಷಾಮಕಾರಿ ಅನಿಷ್ಠನಕ್ಕಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಆರ್ಥಿಕ ಇಲಾಖೆಯ ಸಹಯೋಗದಲ್ಲಿ ಬಜೆಟ್ ನ ಪ್ರಮುಖ ಘೋಷಿತ ಯೋಜನೆಗಳಿಗೆ ಕಾರ್ಯಾದೇಶವನ್ನು ನೀಡುವುದು ಹಾಗೂ ಅನುಷ್ಠಾನದ ಸಂಪೂರ್ಣ ಮೇಲ್ವಿಚಾರಣೆಯನ್ನು ಈ ಸಮಿತಿ ಮಾಡಲಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರಕಿಸುವುದು ಹಾಗೂ ಒಂದೇ ಬಾರಿಗೆ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡುವ ಉದ್ದೇಶದಿಂದ ಪ್ರಥಮ ಬಾರಿಗೆ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದೆ ಎಂದರು. ಬಜೆಟ್ ನಲ್ಲಿ ಘೋಷಿಸಿರುವ ಹೊಸ ಯೋಜನೆಗಳನ್ನು ತೀವ್ರಗತಿಯಲ್ಲಿ ಅನುಷ್ಠಾನಗೊಳಿಸಲು ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಸೂಚನೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿ ಸಿದ್ಧತೆ : ಸರ್ಕಾರ ಕೈಗಾರಿಕೋದ್ಯಮಕ್ಕೆ ಮಹತ್ವ ನೀಡಿದೆ. ನವೆಂಬರ್ ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರ ನೇತೃತ್ವದಲ್ಲಿ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ. ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಪ್ರಥಮ ಸ್ಥಾನ ದಲ್ಲಿದೆ ಕಳೆದ ಮೂರು ತ್ರೈ ಮಾಸಿಕಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ವಿದೇಶಿ ಹೂಡಿಕೆದಾರರಿಗೆ ನಮ್ಮ ರಾಜ್ಯದ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.