ಇತ್ತೀಚಿನ ಬೆಳವಣಿಗೆಗಳಿಂದ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ

ಬೆಂಗಳುರು,ಮಾ,25 : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೈತಿಕ ಪೊಲೀಸ್ ಗಿರಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಮಾಜದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂಬ ಹೇಳಿಕೆ ನೀಡಿದ್ದರು. ಇದು ಸಾಮಾಜಘಾತುಕ ಶಕ್ತಿಗಳಿಗೆ ಬಲ ನೀಡಿದಂತಲ್ಲವೇ? ಕುಂದಾಪುರದಲ್ಲಿ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ನುಗ್ಗಿ ದೌರ್ಜನ್ಯ ನಡೆಸಿದ್ದರು, ಈ ಸಂಬಂಧ ರಾಜ್ಯಾದ್ಯಂತ ವಿರೋಧ ಬಂದ ಮೇಲೆ ಏಳು ಜನ ಪೊಲೀಸರನ್ನು ಅಮಾನತು ಮಾಡಲಾಗಿದೆ. ಜಾಮೀನು ರಹಿತ ಕ್ರಿಮಿನಲ್ ಕೃತ್ಯ ಎಸಗಿದ ಈ ಪೊಲೀಸರು ಜಾಮೀನು ತೆಗೆದುಕೊಳ್ಳುವವರೆಗೆ ಸರ್ಕಾರ ಸುಮ್ಮನಿತ್ತು. ಇಂಥಾ ಪೊಲೀಸರಿಗೆ ತಕ್ಕ ಶಿಕ್ಷೆ ನೀಡದೆ ಹೋದರೆ ಜನಸಾಮಾನ್ಯರಿಗೆ ರಕ್ಷಣೆ ಸಿಗೋದು ಹೇಗೆ?

ಕೇಂದ್ರ ಸಚಿವರಾದ ಭಗವಂತ್ ಖೂಬಾ ಅವರು ಆಳಂದ ತಾಲೂಕಿನಲ್ಲಿ ಶಿವರಾತ್ರಿ ದಿನದಂದು ರಾಜ್‌ಕುಮಾರ್ ಕೆಲ್ಕೂರ್, ಸುಭಾಷ್ ಗುತ್ತೇದಾರ್, ಬಸವರಾಜ್ ಮತ್ತಿಮೋಡ್ ಜೊತೆಗೂಡಿ ನಿಷೇದಾಜ್ಞೆ ಇರುವ ಲಾಡ್ಲೆ ಮಷಾಕ್ ದರ್ಗಾ ಬಳಿಯ ಶಿವಲಿಂಗಾ ಶುದ್ದೀಕರಣ ಮಾಡುತ್ತೇವೆ ಎಂದು ತೀರ್ಮಾನ ಮಾಡುತ್ತಾರೆ. ಆ ದಿನ ದರ್ಗಾದಲ್ಲಿ ಉರೂಸ್ ಸಮಾರಂಭ ನಡೆಯುತ್ತಿತ್ತು, ಸುಮಾರು 300 ಜನಕ್ಕೂ ಹೆಚ್ಚು ಭಗವಂತ್ ಖೂಬಾ ನೇತೃತ್ವದಲ್ಲಿ ಮೆರವಣಿಗೆ ಹೋಗಿದ್ದಾರೆ. ಬಿಜೆಪಿ ಸರ್ಕಾರವೇ ವಿಧಿಸಿರುವ 144 ಸೆಕ್ಷನ್ ಅನ್ನು ಬಿಜೆಪಿ ಮಂತ್ರಿಗಳು ಉಲ್ಲಂಘಿಸಿದ್ದಾರೆ ಎಂದರೆ ಜನಸಾಮಾನ್ಯರಿಗೆ ಕಾನೂನು ಪಾಲನೆ ಮಾಡುವಂತೆ ಹೇಳುವ ನೈತಿಕತೆ ಈ ಸರ್ಕಾರಕ್ಕೆ ಇದೆಯಾ? ನಿಷೇದಾಜ್ಞೆ ಉಲ್ಲಂಘನೆ ಮಾಡಿದವರ ಮೇಲೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಗಲಭೆಗೆ ಸಂಬಂಧಿಸಿದಂತೆ ಕಾನೂನು ಬಾಹಿರವಾಗಿ ನಡೆದುಕೊಂಡ 162 ಜನರನ್ನು ಬಂಧಿಸಲಾಗಿದೆ ಸರಿ, ನಿಷೇದಾಜ್ಞೆ ಉಲ್ಲಂಘನೆ ಮಾಡಿದ ಭಗವಂತ್ ಖೂಬಾ ಮೇಲೆ ಕ್ರಮ ಯಾಕಿಲ್ಲ? ಕೇಂದ್ರ ಸಚಿವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯಾ?

ಶಿವಮೊಗ್ಗದಲ್ಲಿ ಫೆಬ್ರವರಿ 20 ರಂದು ನಡೆದ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆಯನ್ನು ನಾನು ಖಂಡಿಸಿದ್ದೇನೆ. ಕೊಲೆಗಾರರಿಗೆ ಗಲ್ಲು ಶಿಕ್ಷೆಯಾಗಬೇಕು ಎಂಬುದು ನನ್ನ ನಿಲುವು. ಕೊಲೆಯಾದ ಮರುದಿನ ಕೆ.ಎಸ್ ಈಶ್ವರಪ್ಪ ಅವರು ಮುಸಲ್ಮಾನ ಗೂಂಡಾಗಳು ಹರ್ಷನನ್ನು ಕೊಂದಿದ್ದಾರೆ ಎಂದರು. ಆಗಿನ್ನೂ ಎಫ್.ಐ.ಆರ್ ಆಗಿರಲಿಲ್ಲ, ತನಿಖೆ ಆರಂಭವಾಗಿರಲಿಲ್ಲ. ಈಶ್ವರಪ್ಪ ಅವರಿಗೆ ಕೊಲೆ ಆಗೋದು ಮೊದಲೇ ಗೊತ್ತಿದ್ದರೆ ಪೊಲೀಸರಿಗೆ ವಿಷಯ ತಿಳಿಸಿ ಯುವಕನ ಪ್ರಾಣ ಉಳಿಸಬಹುದಿತ್ತಲ್ಲವೇ?
ಕೊಲೆ ವಿಷಯದಲ್ಲಿ ಸರ್ಕಾರದ ಸಚಿವರ ಹೇಳಿಕೆಯ ನಡುವೆ ಸಾಮತ್ಯತೆಯೂ ಇಲ್ಲ. ಶಿವಮೊಗ್ಗದ ಉಸ್ತುವಾರಿ ಸಚಿವರಾದ ನಾರಾಯಣ ಗೌಡ ಅವರು ಇದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಹೇಳಿದ್ದರು. ಪೆಬ್ರವರಿ 20 ರಂದು ಕೊಲೆಯಾದ ದಿನವೇ ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು, ಪೆಬ್ರವರಿ 21 ರಂದು ಈಶ್ವರಪ್ಪ ಅವರ ಮುಂದಾಳತ್ವದಲ್ಲಿ ಶವಯಾತ್ರೆ ಮಾಡಲಾಯಿತು. ಈ ವೇಳೆ ಡಿ.ಸಿ, ಎಸ್ಪಿ ಅವರ ಎದುರೇ ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು, ಕಲ್ಲುತೂರಾಟ ನಡೆಯಿತು, ಹಲ್ಲೆ ನಡೆಯಿತು, ಮಚ್ಚು ಲಾಂಗುಗಳ ಪ್ರದರ್ಶನ ಮಾಡಲಾಯಿತು. ಈ ಕೃತ್ಯ ಎಸಗಿದೆ ಎಷ್ಟು ಜನರ ಮೇಲೆ ಕೇಸ್ ಹಾಕಲಾಗಿದೆ? ಈಶ್ವರಪ್ಪ ಅವರ ಮೇಲೆ ಏನು ಕ್ರಮ ಜರುಗಿಸಲಾಗಿದೆ? ಇವತ್ತಿನ ವರೆಗೆ ನಷ್ಟಕ್ಕೀಡಾದ ಜನರಿಗೆ ಒಬ್ಬರಿಗೂ ಪರಿಹಾರ ನೀಡಿಲ್ಲ.

ವೈಯಕ್ತಿಕ ಕಾರಣಕ್ಕೆ ಹತ್ಯೆಗೀಡಾದ ಹರ್ಷನಿಗೆ ಸರ್ಕಾರ ರೂ. 25 ಲಕ್ಷ ಪರಿಹಾರ ನೀಡಿತು. ಇದಕ್ಕೆ ನಮ್ಮ ತಕರಾರು ಇಲ್ಲ ಸರಿ. ಆದರೆ ಇದೇ ರೀತಿ ಬೆಳ್ತಂಗಡಿಯಲ್ಲಿ ಭಜರಂಗದಳದ ಕಾರ್ಯಕರ್ತ ಕೃಷ್ಣ ಎಂಬುವನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕುಟುಂಬದವರಿಗೆ ಪರಿಹಾರ ನೀಡಬೇಕಿತ್ತು. ಆದರೆ ಸರ್ಕಾರ ಕೊಟ್ಟಿದ್ದು ಕೇವಲ ರೂ. 4 ಲಕ್ಷ ಮಾತ್ರ. ಸಾವಿನಲ್ಲಿ ಏಕೆ ಈ ತಾರತಮ್ಯ? ಈತ ಕಾಂಗ್ರೆಸ್ ಕಾರ್ಯಕರ್ತ ಅಂತಲೋ? ಜನವರಿ 17 ರಂದು ನರಗುಂದದಲ್ಲಿ ಸಮೀರ್ ಸುಬಾನ್ ಸಾಬ್ ಎಂಬ ಯುವಕನ ಕೊಲೆ ಆಯಿತು. ಕೊಲೆಗೆ ಚಿತಾವಣೆ ಮಾಡಿದ್ದು ಸಂಘ ಪರಿವಾರ. ಆದ್ದರಿಂದ ಕೊಲೆಯಾದ ಯುವಕನ ಕುಟುಂಬಕ್ಕೆ ನಯಾಪೈಸೆ ಪರಿಹಾರ ನೀಡಿಲ್ಲ ಮತ್ತು ಕೊಲೆಗೆ ಪ್ರೇರಣೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ. ಕೊಲೆಯ ಪ್ರತ್ಯಕ್ಷದರ್ಶಿ ಶಂಶೀರ್ ಖಾನ್ ಪಠಾಣ್ ಹೇಳಿಕೆ ನೀಡಿದ್ದರೂ ಅದನ್ನು ಆಧರಿಸಿ ಕ್ರಮ ಕೈಗೊಂಡಿಲ್ಲ. ಸಂಜೀವ್ ನಲವಡೆ ಎಂಬ ಸಂಘ ಪರಿವಾರಕ್ಕೆ ಸೇರಿದ ವ್ಯಕ್ತಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರತ್ಯಕ್ಷ ದರ್ಶಿಯ ಹೇಳಿಕೆ ಮೇಲೆ ಕಾನೂನು ಕ್ರಮ ಜರುಗಿಸಬೇಕಿತ್ತಲ್ಲವೇ? ಮೃತನ ಕುಟುಂಬಕ್ಕೆ ಪರಿಹಾರ ಕೊಡಬೇಕಿತ್ತು ಅಲ್ಲವೇ?

ಕೊಡಗಿನ ಯೋಧ ಅಲ್ತಾಫ್ ಅಹ್ಮದ್ ಅವರು ಹಿಮಾಪಾತದಲ್ಲಿ ಸಿಲುಕಿ ಸಾವಿಗೀಡಾದರು. ನಮ್ಮ ಸರ್ಕಾರ ಇದ್ದಾಗ ರಾಜ್ಯದ ಯಾವುದೇ ಸೈನಿಕ ಸಾವಿಗೀಡಾದರೂ ರೂ. 25 ಲಕ್ಷ ಪರಿಹಾರ ನೀಡುತ್ತಿದ್ದೆವು. ಆದರೆ ಅಲ್ತಾಫ್ ಅಹ್ಮದ್ ಅವರು ಹುತಾತ್ಮರಾಗಿ ಇಷ್ಟು ದಿನ ಕಳೆದರೂ ಅವರ ಕುಟುಂಬಕ್ಕೆ ಸರ್ಕಾರ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಹಿಂದೂ ಸಂಘಟನೆ ಕಾರ್ಯಕರ್ತ ಸತ್ತರೆ ಒಂದು, ಕಾಂಗ್ರೆಸ್ ಕಾರ್ಯಕರ್ತ ಸತ್ತರೆ ಒಂದು, ಮುಸ್ಲಿಂ ಯೋಧ ಸತ್ತರೆ ಒಂದು ರೀತಿ ಪರಿಹಾರ ನೀಡುವುದು ಅನ್ಯಾಯ. ಕುವೆಂಪು ಅವರು ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದಿದ್ದರು. ಇದೇನಾ ನಿಮ್ಮ ನ್ಯಾಯ? ಮುಖ್ಯಮಂತ್ರಿಗಳಿಗೆ ಭದ್ರತೆ ನೀಡುತ್ತಿದ್ದ ಪೊಲೀಸರು ಡ್ರಗ್ಸ್ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದರೆ ಭಯ ಇದೆಯಾ? ಮಂಡ್ಯದಲ್ಲಿ ಸರ್ಕಾರಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುವಾಗ ತಹಶಿಲ್ದಾರರು ಅದನ್ನು ತಡೆದು, ನೂರು ಮೂಟೆ ಅಕ್ಕಿಯನ್ನು ಪೊಲೀಸ್ ಸುಪರ್ದಿಗೆ ನೀಡಿದ್ದರು. ನಂತರ ಡಿಸಿ ಗೆ ವರದಿ ನೀಡುವಾಗ ಪೊಲೀಸ್ ಸುಪರ್ದಿಯಲ್ಲಿದ್ದ ಅಕ್ಕಿ ಮಾಯವಾಗಿದೆ ಎಂದಿದ್ದಾರೆ. ಇದೆಂತಾ ವ್ಯವಸ್ಥೆಯಲ್ಲಿ ನಾವಿದ್ದೇವೆ? ಈ ಸರ್ಕಾರ ಪರಿಹಾರ ನೀಡುವಲ್ಲಿ ತಾರತಮ್ಯ, ಅಪರಾಧಿಗಳನ್ನು ಶಿಕ್ಷಿಸುವಲ್ಲಿ ತಾರತಮ್ಯ ಮಾಡುತ್ತಿರುವುದರಿಂದ ಸಮಾಜದಲ್ಲಿ ಅಶಾಂತಿ, ಅಸಹನೆ ಉಂಟಾಗಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಆಗುತ್ತಿದೆ. ಎಲ್ಲಿ ಶಾಂತಿ ಸುವ್ಯವಸ್ಥೆ ಇರುವುದಿಲ್ಲವೋ ಆ ರಾಜ್ಯ ದೇಶ ಅಭಿವೃದ್ಧಿ ಆಗಲು ಸಾಧ್ಯವಿಲ್ಲ.

Leave a Comment

Your email address will not be published. Required fields are marked *

Translate »
Scroll to Top