ದಾವಣಗೆರೆ, ಮಾರ್ಚ್ 21: ಉಕ್ರೇನ್ ನಿಂದ ವಾಪಸ್ಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾಗಿದ್ದು, ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಗಂಭೀರ ಚಿಂತನೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವೀನ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಅವರು ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಉಕ್ರೇನ್ ನಲ್ಲಿ ಕೋರ್ಸು ಭಿನ್ನವಾಗಿದೆ. ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಇರುವುದರಿಂದ ಈ ಕುರಿತು ಕೇಂದ್ರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದರು.
ಸರ್ಕಾರದ ಶುಲ್ಕ ಕಡಿಮೆಯಿದ್ದರೂ, ವೈದ್ಯಕೀಯ ಶಿಕ್ಷಣದ ವೆಚ್ಚ ಖಾಸಗಿ ವಲಯದಲ್ಲಿ ಹೆಚ್ಚಾಗುತ್ತಿದೆ.90- 95% ಪಡೆದ ವಿದ್ಯಾರ್ಥಿಗಳಿಗೆ ನೀಟ್ ನಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್ ಹಾಗೂ ಎನ್.ಆರ್.ಐ ಸೀಟುಗಳನ್ನು ಪಡೆಯಲು ದುಬಾರಿಯಾಗಿರುವುದರಿಂದ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶುಲ್ಕ ಕಡಿಮೆ ಮಾಡಲು ಎ, ಬಿ, ಸಿ ವರ್ಗಗಳನ್ನು ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ವೈದ್ಯಕೀಯ ಕೋರ್ಸು ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧರಿಸುತ್ತದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆದಿದೆ ಎಂದರು.