ಹಾವೇರಿ,ಮಾ,19 : ಇತ್ತೀಚೆಗೆ ಉಕ್ರೇನ್ ನಲ್ಲಿ ರಷ್ಯಾ ದಾಳಿ ಸಂದರ್ಭದಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಪಾರ್ಥಿವ ಶರೀರ ಮಾರ್ಚ್ 21 ರ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮಕ್ಕೆ ಮಗನ ಪಾರ್ಥಿವ ಶರೀರ ತಲುಪುತ್ತದೆ. ನಂತರ ವೀರ ಶೈವ ಪದ್ಧತಿ ಪ್ರಕಾರ ಪೂಜಾ ಕಾರ್ಯ ನೆರವೇರಿಸಲಾಗುವುದು. ಸಂಜೆವರೆಗೂ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಎಂದು ಮೃತ ನವೀನ ತಂದೆ ಶೇಖರಪ್ಪ ಹೇಳಿದ್ದಾರೆ.
ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ದರ್ಶನದ ಬಳಿಕ ನವೀನ ಗ್ಯಾನ ಗೌಡರ ಮೃತ ದೇಹವನ್ನು ದಾವಣಗೆರೆಯ ಎಸ್.ಎಸ್.ಆಸ್ಪತ್ರೆಗೆ ದಾನ ಮಾಡಲು ತೀರ್ಮಾನಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಕೊನೆಗೂ 22 ದಿನಗಳ ಬಳಿಕ ವಾದರೂ ಮಗನ ಮುಖವನ್ನು ನೋಡುವ ಅವಕಾಶ ದೊರೆಯುತ್ತಿದೆ. ಮಗನ ಮೃತ ದೇಹ ತರಲು ಸಹಕರಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.