ಬೆಂಗಳೂರು,ಮಾ,7 : ಜಲ ಸಂಪನ್ಮೂಲ ಇಲಾಖೆಯ ವಿಶೇಷ ಅಭಿವೃದ್ಧಿ ವಾಹಕಗಳಾಗಿರುವ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮಗಳ ಕಾಮಗಾರಿಗಳ ಪ್ರಸ್ತುತ ಸಾಲಿನಲ್ಲಿ 10967.47 ಕೋಟಿ ರೂಪಾಯಿ ಪಾವತಿ ಮಾಡಲಾಗಿದ್ದು, ನಾಲ್ಕೂ ನಿಗಮಗಳಿಂದ ಇನ್ನೂ 9998.95 ಕೋಟಿ ರೂಪಾಯಿಗಳ ಪಾವತಿ ಬಾಕಿ ಇದ್ದು ನಿಗಮಗಳಲ್ಲಿ ಅನುದಾನ ಲಭ್ಯತೆ ಅಧಾರದ ಮೇಲೆ ಆದ್ಯತೆ ಮೇಲೆ ಈ ಕಾಮಗಾರಿಗಳ ಬಿಲ್ಲುಗಳನ್ನು ಹಂತ ಹಂತವಾಗಿ ಪಾವತಿಸಲು ಕ್ರಮ ಜರುಗಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಎಂ.ಫಾರೂಕ್ ಇವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸುತ್ತಿದ್ದ ಸಚಿವರು ಈ ನಿಗಮಗಳಡಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು 1,00,000 ಕೋಟಿ (ಒಂದು ಲಕ್ಷ ಕೋಟಿ) ರೂಪಾಯಿಗಳನ್ನು ಮುಂದುವರೆದ/ಪೂರ್ಣಗೊಂಡಿರುವ ಕಾಮಗಾರಿಗಳಡಿಯಲ್ಲಿ ಪಾವತಿಗೆ ಬಾಕಿ ಇರುವ ಮೊತ್ತವನ್ನು ಪಾವತಿಸಲು ಕ್ರಮಕೈಗೊಳ್ಳಲಾಗುತ್ತಿದೆ.ಜನವರಿ 2022ರ ಅಂತ್ಯಕ್ಕೆ ಕೃಷ್ಣಾ ಭಾಗ್ಯ ಜಲ ನಿಗಮದಿಂದ ರೂ.4165.44, ಕಾವೇರಿ ನೀರಾವರಿ ನಿಗಮದಿಂದ 3,904.54, ವಿಶ್ವೇಶ್ವರಯ್ಯ ಜಲ ನಿಗಮದಿಂದ 1368.45, ಕಾವೇರಿ ನೀರಾವರಿ ನಿಗಮದಿಂದ 1,386.31 ವೆಚ್ಚ ಮಾಡಿರುತ್ತಾರೆ. ಒಟ್ಟು 10,824.74 ಲಕ್ಷ ರೂ.ಗಳನ್ನು ಪಾವತಿ ಮಾಡಲಾಗಿದೆ. ಬಾಕಿ ಉಳಿದ ನಿಗಮವಾರು ವಿವರಗಳು: ಕೃಷ್ಣಾ ಭಾಗ್ಯ ಜಲ ನಿಗಮ ರೂ.1,312.40, ಕರ್ನಾಟಕ ನೀರಾವರಿ ನಿಗಮ ರೂ.4058.32, ಕಾವೇರಿ ನೀರಾವರಿ ನಿಗಮ ರೂ.1,355.16 ಮತ್ತು ವಿಶ್ವೇಶ್ವರಯ್ಯ ಜಲ ನಿಗಮ ರೂ.3,273.07 ಬಾಕಿ ಇರುತ್ತದೆ.