ಹುಬ್ಬಳ್ಳಿ, ಮಾರ್ಚ್ 06 : ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕೇಶ್ವಾಪೂರದ ಕೆ.ಜಿ. ಗಾರ್ಡನ್ ನಲ್ಲಿ ಆಯೋಜಿಸಿದ್ದ ದಿವಂಗತ ಶ್ರೀ ವೇ.ಮೂ ಕಾಡಯ್ಯ ಗು. ಹಿರೇಮಠ ಅವರ 81ನೇ ಜನ್ಮ ಸಂಸ್ಮರಣ ದಿನಾಚರಣೆ ಪ್ರಯುಕ್ತ ಕಂಚಿನ ಪುತ್ಥಳಿ ಅನಾವರಣ ಮತ್ತು ಸಂಸ್ಮರಣ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು. ಸಾವಿನ ನಂತರವೂ ಬದುಕುವವರು ಸಾಧಕರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅದರಂತೆಯೇ ಕಾಡಯ್ಯ ಅಜ್ಜ ಬದುಕಿದರು. ಅವರ ಪ್ರೀತಿಯ ಜೊತೆಗೆ ನೀತಿ ತತ್ವ ಆದರ್ಶಗಳನ್ನು ತಿಳಿಸಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ನೆನೆಪುಗಳು ಚಿರಸ್ಥಾಯಿ : ಸಮಾಜದ ಎಲ್ಲರನ್ನೂ ಪ್ರೀತಿಸುತ್ತಿದ್ದವರು. ಉರ್ದು ಶಾಲೆ ಆರಂಭಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಎಲ್ಲರೊಂದಿಗೂ ಆತ್ಮೀಯ ಸಂಬಂಧ ಹೊಂದಿದ್ದರು ಅವರ ನೆನೆಪುಗಳು ಚಿರಸ್ಥಾಯಿಯಾಗಿರುತ್ತದೆ. ಭಾವನೆಗಳಲ್ಲಿ ಗೌರವ ಸಲ್ಲಿಸಿ ಅವರ ಆದರ್ಶಗಳನ್ನು ಪಾಲಿಸುವ ಪ್ರಯತ್ನ ವನ್ನು ಮಾಡೋಣ ಎಂದರು. ಕಾಡಯ್ಯ ಅಜ್ಜನವರದು ಅಪರೂಪದ ವ್ಯಕ್ತಿತ್ವ. ಕಲಿ ಯುಗದಲ್ಲಿಯೂ ಅವರ ಗುಣವಿರುವವವರು ಇರುತ್ತಾರೆ ಅಂದರೆ ನಂಬಲು ಸಾಧ್ಯವಿಲ್ಲ. ಮಗುವಿನಂಥ ಮನಸ್ಸು, ಸ್ಪಷ್ಟ ವಿಚಾರ ನೆರನುಡಿ, ಕಲ್ಮಶವಿಲ್ಲದವರು. ಪ್ರಾಮಾಣಿಕತೆ, ಯಾರಿಗೂ ಕೆಟ್ಟದ್ದನ್ನು ಬಯಸದೆ, ಲೋಕ ಕಲ್ಯಾಣವನ್ನು ಬಯಸಿದವರು.
ಸರ್ವರಿಗೂ ಒಳಿತು ಬಯಸಿದವರು : ಲೋಕಾಪುರ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳು, ಸರ್ವಸದಸ್ಯರಿಗೆ ಒಳಿತು ಬಯಸಿದರು. ನಮ್ಮ ತಂದೆಯವರೊಂದಿಗೆ ಕಾಡಯ್ಯ ಅಜ್ಜನವರ ಒಡನಾಟ ರಾಜಕೀಯ ವನ್ನು ಮೀರಿದ್ದಾಗಿತ್ತು. ಅತ್ಯಂತ ಗೌರವ ಪೂರ್ವಕ ಮತ್ತು ಭಾವನಾತ್ಮಕ ಸಂಬಂಧವಿತ್ತು. ನಾನು ಅವರ ಕಳಕಳಿಯನ್ನು ನೋಡಿದ್ದು ರೈತರ ಟ್ರ್ಯಾಕ್ಟರ್ ಉರುಳಿಬಿದ್ದ ಸಂದರ್ಭದಲ್ಲಿ ಮರಣಿಸಿದ ರೈತರ ಮೃತದೇಹ ಪಡೆಯಲು ಮೂರು ದಿನ ಹಗಲು ರಾತ್ರಿ ಊಟ ನಿದ್ರೆಯಿಲ್ಲದೆ ಶ್ರಮಿಸಿದ್ದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಸಂಕಷ್ಟ ದಲ್ಲಿ ಯಾವ ರೀತಿ ಸಾರ್ವಜನಿಕ ಜೀವನದಲ್ಲಿ ಇರಬೇಕು ಹಾಗೂ ಅವರಿಗಿದ್ದ ಮಾನವೀಯ ಗುಣಗಳನ್ನು ಕಾಡಯ್ಯ ಅಜ್ಜನವರನ್ನು ನೋಡಿ ಕಲಿತಿದ್ದೇವೆ ಎಂದರು.
ಕಾಡಯ್ಯ ಅಜ್ಜನವರ ನಿಲುವು ನಮಗೆ ಮಾರ್ಗದರ್ಶಕ : ಹಲವಾರು ಸಂದರ್ಭಗಳಲ್ಲಿ ಅವರ ನಿರ್ಣಯ ಹಾಗೂ ನಿಲುವುಗಳು ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿವೆ. ರೈತರ ಬಗ್ಗೆ ವಿಶೇಷ ಕಾಳಜಿ ಮತ್ತು ಪ್ರೀತಿ ಇತ್ತು. 76 ವರ್ಷಗಳವರೆಗೂ ಹೊಲದಲ್ಲಿ ದುಡಿಯುತ್ತಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. ಯಾವುದಕ್ಕೂ ಅತಿ ಆಸೆ ಪಡದೆ, ದುಡಿಮೆಯಿಂದಲೇ ಮುಂದುಬರಬೇಕೆನ್ನುವ ಹಠ ಮತ್ತು ಛಲವಿತ್ತು. ಅತ್ಯಂತ ಪ್ರಾಮಾಣಿಕ ವ್ಯಕ್ತಿ ಯಾಗಿದ್ದ ಅವರ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕವಾಗಿದ್ದರು.
ಗ್ರಾಮಗಳ ಅಭಿವೃದ್ಧಿ : 90 ರ ದಶಕದಲ್ಲಿ ಒಂಭತ್ತು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 75 ಲಕ್ಷ ರೂ.ಗಳ ಅನುದಾನ ಪಡೆದು ಎಲ್ಲಾ ಗ್ರಾಮಗಳಿಗೆ ದೊಡ್ಡ ಸಹಾಯ ಮಾಡಿದರು. ಜನಪರವಾಗಿದ್ದ ಅವರಲ್ಲಿ ಯಾವುದೇ ಮಹತ್ವಾಕಾಂಕ್ಷೆ ಇರಲಿಲ್ಲ. ಅಧಿಕಾರದಲ್ಲಿದ್ದಾಗ ನ್ಯಾಯಸಮ್ಮತವಾಗಿ, ಮಾನವೀಯ ವಾಗಿ ನಡೆದುಕೊಳ್ಳಬೇಕೆಂದು ಅವರಿಂದ ನಾವು ಕಲಿತಿದ್ದೇವೆ ಎಂದರು. ಅವರು ಸದಾ ಕಾಲ ನಮ್ಮ ಸ್ಮರಣೆಯಲ್ಲಿ ಇರುತ್ತಾರೆ ಎಂದು ನುಡಿದರು.