ಬೆಂಗಳೂರು,ಮಾ,6 : ಮೇಕೆದಾಟು ವಿಚಾರವಾಗಿ ನಾವೇನು ಮಾಡಲು ಸಾಧ್ಯವಿಲ್ಲ, ಕರ್ನಾಟಕ ಹಾಗೂ ತಮಿಳುನಾಡು ನಡುವೆ ಮಾತುಕತೆಗೆ ಮಧ್ಯಸ್ಥಿಕೆ ನಡೆಸಲು ಸಿದ್ಧರಿದ್ದೇವೆ ಎಂಬ ಕೇಂದ್ರ ಜಲಶಕ್ತಿ ಸಚಿವ ಶೇಖಾವತ್ ಅವರ ಹೇಳಿಕೆ ಕೇಳಿ ಮೌನ ವಹಿಸಿದ್ದ ಮುಖ್ಯಮಂತ್ರಿಗಳು ಈ ಕೂಡಲೇ ಈ ಬಗ್ಗೆ ಉತ್ತರ ನೀಡಬೇಕು ಅಥವಾ ರಾಜೀನಾಮೆ ನೀಡಬೇಕು. ತಮ್ಮ ಸಮ್ಮುಖದಲ್ಲೇ ಮೇಕೆದಾಟು ವಿಚಾರವನ್ನು ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವರು ಹೇಳಿಕೆ ಕೊಟ್ಟಾಗ ಆ ಬಗ್ಗೆ ಮಾತನಾಡದೆ ಮುಖ್ಯಮಂತ್ರಿಗಳು ಮೌನ ವಹಿಸಿ ತಮ್ಮ ಸ್ಥಾನದ ಜವಾಬ್ದಾರಿ ಮರೆತಿದ್ದಾರೆ. ಕೇಂದ್ರ ಸಚಿವರಾದವರೆ, ನಾವೇನು ಮಾಡಲು ಸಾಧ್ಯವಿಲ್ಲ, ನೀವುಗಳೇ ಬಗೆ ಹರಿಸಿಕೊಳ್ಳಿ ಎಂದರೆ ಹೇಗೆ? ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ತಮಿಳುನಾಡಿನವರು ಎಂದಿಗೂ ಒಪ್ಪುವುದಿಲ್ಲ. ರಾಜಕಾರಣ ಮಾಡುವವರು ಎಂದಿಗೂ ಒಪ್ಪುವುದಿಲ್ಲ, ಇದು ಸಾಧ್ಯವಾಗದ ವಿಚಾರ.
ಕೇಂದ್ರ ಸರ್ಕಾರದ ಪರಿಸರ ಇಲಾಖೆಯಿಂದ ಇಂತಹ ದಿನ ಅನುಮತಿ ಕೊಡಿಸುತ್ತೇನೆ ಎಂದು ದಿನಾಂಕ ನಿಗದಿಪಡಿಸಬೇಕು. ಅದನ್ನು ಬಿಟ್ಟು ಮಧ್ಯಸ್ಥಿಕೆ ವಹಿಸುತ್ತೇವೆ ಎನ್ನುವುದಲ್ಲ. ಮಧ್ಯಸ್ಥಿಕೆ ಮಾಡಿಕೊಳ್ಳಲಿ ಅದು ಬೇರೆ ವಿಚಾರ, ಆದರೆ ನಮ್ಮ ಕೈಯಲ್ಲಿ ಈ ಯೋಜನೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದು ರಾಜ್ಯಕ್ಕೆ ದೊಡ್ಡ ಅಪಮಾನ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಅಸಮರ್ಥ ಎಂಬುದು ರುಜುವಾತಾಗುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು. ಇಲ್ಲವಾದರೆ ಅಧಿಕಾರ ಬಿಟ್ಟು ಹೋಗಬೇಕು. ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರಿಸುವಷ್ಟು ದೊಡ್ಡವರಲ್ಲ’ ಎಂದರು.