ಬೆಂಗಳೂರು, ಫೆಬ್ರವರಿ ,28, : ಇಚ್ಛಾಶಕ್ತಿ ಮತ್ತು ಉತ್ಸಾಹ ಹೊಂದಿದ್ದರೆ ದೃಷ್ಟಿಹೀನತೆ ಅಥವಾ ಯಾವುದೇ ಅಂಗವೈಕಲ್ಯವು ಸಾಧನೆಗೆ ಅಡಿ ಮಾಡುವುದಿಲ್ಲ ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. ಬೆಂಗಳೂರಿನ ಚಾನ್ಸೆರಿ ಪೆವಿಲಿಯನ್ನಲ್ಲಿ ಸಮರ್ಥನಂ ಟ್ರಸ್ಟ್ ವಿಕಲಚೇತನರಿಗಾಗಿ ಆಯೋಜಿಸಿದ್ದ ಇಂಡಸ್ಲ್ಯಾಂಡ್ ಬ್ಯಾಂಕ್ ಬ್ಲೈಂಡ್ ಕ್ರಿಕೆಟ್ ರಾಷ್ಟ್ರೀಯ ಸಮ್ಮೇಳನ-2022 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. . ವಿಶೇಷ ಚೇತನರು ಮಾನವ ಸಂಪನ್ಮೂಲದ ಅವಿಭಾಜ್ಯ ಅಂಗವಾಗಿದ್ದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ವಿಶೇಷ ಚೇತನರಲ್ಲಿ ಇಚ್ಛಾಶಕ್ತಿ ಮತ್ತು ಉತ್ಸಾಹ ತುಂಬುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಮ್ಮ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಸಮರ್ಥ ನಾಯಕತ್ವದಲ್ಲಿ “ಸಬ್ಕಾ ಸಾಥ್ ಸಬ್ಕಾ ವಿಕಾಸ್” ಮಂತ್ರವನ್ನು ಅರಿತುಕೊಂಡ ಭಾರತ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಸಮಾಜವನ್ನು ನಿರ್ಮಿಸಲು ಮತ್ತು ದಿವ್ಯಾಂಗರ ಸಬಲೀಕರಣಕ್ಕಾಗಿ ಅಭೂತಪೂರ್ವ ಮತ್ತು ಶ್ಲಾಘನೀಯ ಕೆಲಸವನ್ನು ಮಾಡುತ್ತಿದೆ. ಭಾರತ ಸರ್ಕಾರದ ವಿಕಲಚೇತನರ ಸಬಲೀಕರಣ ಇಲಾಖೆಯ ಎಡಿಐಪಿ ಯೋಜನೆಯಡಿ ದೃಷ್ಟಿ ವಿಕಲಚೇತನರಿಗೆ ಸ್ಮಾರ್ಟ್ ಫೋನ್, ಡಿಜಿಪ್ಲೇಯರ್ ಮತ್ತು ವಾಕಿಂಗ್ ಸ್ಟಿಕ್ಗಳು ಮತ್ತು ಸ್ಮಾರ್ಟ್ ಕ್ಯಾನ್ಗಳಂತಹ ಸಹಾಯಕ ಸಾಧನಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ದೃಷ್ಟಿ ವಿಕಲಚೇತನರ ಶಿಕ್ಷಣ ಮತ್ತು ಪುನರ್ವಸತಿಗಾಗಿ ಭಾರತ ಸರ್ಕಾರದಿಂದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಿಶ್ಯುಲಿ ಹ್ಯಾಂಡಿಕ್ಯಾಪ್ಡ್ ಡೆಹ್ರಾಡೂನ್ (NIVH) ಅನ್ನು ಸ್ಥಾಪಿಸಲಾಗಿದೆ. ಭಾರತ ಸರ್ಕಾರವು ಬ್ರೈಲ್ ಅಭಿವೃದ್ಧಿಗಾಗಿ ಮತ್ತು ಬ್ರೈಲ್ ಪುಸ್ತಕಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬ್ರೈಲ್ ಪ್ರೆಸ್ಗಳ ಸ್ಥಾಪನೆ ಮತ್ತು ಅಸ್ತಿತ್ವದಲ್ಲಿರುವ ಬ್ರೈಲ್ ಪ್ರೆಸ್ಗಳ ಆಧುನೀಕರಣದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ದಿವ್ಯಾಂಗಜನರ ಸಬಲೀಕರಣವನ್ನು ಹಲವು ಯೋಜನೆಗಳ ಮೂಲಕ ಮಾಡಲಾಗುತ್ತಿದೆ. ದಿವ್ಯಾಂಗರ ಸಬಲೀಕರಣಕ್ಕಾಗಿ ಸರ್ಕಾರದ ಜೊತೆಗೆ ಕಾರ್ಪೊರೇಟ್ ಜಗತ್ತು ಮತ್ತು ಅನೇಕ ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿವೆ. ಅದರಲ್ಲಿ ಸಮರ್ಥನಂ ಟ್ರಸ್ಟ್ ಕೂಡ ಒಂದಾಗಿದೆ. ಡಾ. ಮಹಾಂತೇಶ ಜೀ ಅವರ ಪ್ರಯತ್ನದಿಂದ ಇಂದು ದೃಷ್ಟಿ ವಿಕಲಚೇತನರ ಕ್ರಿಕೆಟ್ನಲ್ಲಿ ದೇಶವು ವಿಶ್ವದಲ್ಲೇ ಹೊಸ ಗುರುತನ್ನು ಪಡೆದುಕೊಂಡಿದೆ. ವಿಶೇಷವಾಗಿ ಅಂಧರ ಕ್ರಿಕೆಟ್ ತಂಡ, 2014 ರಲ್ಲಿ ಅಂಧರ ವಿಶ್ವಕಪ್ ಗೆಲ್ಲುವ ಮೂಲಕ ಭಾರತದ ಗೌರವವನ್ನು ಹೆಚ್ಚಿಸಿತು. ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ದೃಷ್ಟಿ ವಿಕಲಚೇತನ ತಂಡದ ಆಟಗಾರರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು ಎಂದರು.
ಪ್ಯಾರಾ ಒಲಂಪಿಕ್ಸ್ ನಲ್ಲಿ ಭಾರತೀಯ ವಿಶೇಷ ಚೇತನರು ತೋರಿದ ಸಾಧನೆ ಅದ್ಭುತವಾಗಿತ್ತು. ನಾನು ಸಹ ಕ್ರೀಡಾಪಟುವಾಗಿದ್ದೇನೆ. ಅಂಗವಿಕಲರು ಮತ್ತು ದೃಷ್ಟಿಹೀನ ಆಟಗಾರರಿಗೆ ಮನೆಯಿಂದ ಹೊರಬರುವುದು ಎಷ್ಟು ಕಷ್ಟ ಎಂದು ನನಗೆ ಚೆನ್ನಾಗಿ ತಿಳಿದಿದೆ. ಇಂದು, ಎಲ್ಲಾ ಮಹಿಳಾ ಆಟಗಾರರು ಮನೆಯಿಂದ ಹೊರಬಂದು ಸಮಾಜಕ್ಕೆ ಧನಾತ್ಮಕ ಸಂದೇಶವನ್ನು ನೀಡಿದ್ದೀರಿ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ ಮತ್ತು ನೀವು ಎಲ್ಲಾ ಮಹಿಳಾ ಆಟಗಾರರು ದೇಶವನ್ನು ಪ್ರತಿನಿಧಿಸಬೇಕು ಮತ್ತು ದೇಶಕ್ಕೆ ಪ್ರಶಸ್ತಿಗಳನ್ನು ತರಬೇಕೆಂದು ನಾನು ಬಯಸುತ್ತೇನೆ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ, ಸಮರ್ಥನಂ ಟ್ರಸ್ಟ್ ಸಂಸ್ಫಾಕ ಮಹಂತೇಶ್, ಇಂಡಸ್ ಬ್ಯಾಂಕ್ ನ ಮತಿಲ್ದಾ ಲೋಬಾ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.