ವ್ಯಕ್ತಿತ್ವ ವಿಕಸನ ಮಾಡುವ ಶಕ್ತಿ ಕ್ರೀಡೆಗಿದೆ: ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿ: ಸಚಿವ ಡಾ. ಕೆ. ಸುಧಾಕರ್

ದೇವನಹಳ್ಳಿ:
ಕ್ರೀಡೆಗಳು ಎಂದಿಗೂ ಸ್ಪೂರ್ತಿದಾಯಕ. ಅದರೊಂದಿದೆ ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನ ಮಾಡುವಂತಹ ಶಕ್ತಿಯಾಗಿದೆ. ಹಾಗಾಗಿ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದು
ವೈದ್ಯಕೀಯ ಆರೋಗ್ಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾದ ಸುಧಾಕರ್ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ವಿಜಯಮಾರುತಿ ಕ್ರಿಕೆಟ್ ತಂಡ, ಎಸ್ ಆರ್ ಎಸ್ ಬಾಯ್ಸ್ ಹಾಗೂ ಅಕ್ಷತಾ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಜಯಪುರ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ,
ಸೋಲು ಗೆಲುವನ್ನು ಸಮಚಿತ್ತದಿಂದ ಸ್ವೀಕಾರ ಮಾಡಿ, ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು. ನಾಯಕತ್ವ, ತ್ಯಾಗ, ತಂಡವನ್ನು ನಿಭಾಯಿಸುವ ಸಾಮರ್ಥ್ಯ ಇವೆಲ್ಲಾ ಕ್ರೀಡೆಯಿಂದ ಕಲಿತಾಗ ಜೀವನದ ಅನೇಕ ಸಮಸ್ಯೆಗಳನ್ನು ನಿಭಾಯಿಸುವ ಹಾಗೂ ಉತ್ತಮ ನಿರ್ಧಾರ ಕೈಕೊಳ್ಳಲು ಸಾಧ್ಯ. ಜೀವನದ ಈ ಕಲೆ ಕ್ರೀಡಾಳುವಾಗಿದ್ದಾಗ ಬೇಗ ಸಿದ್ಧಿಸುತ್ತದೆ. ಕ್ರೀಡೆಗಳನ್ನು ಕೆಲವರು ಹವ್ಯಾಸವಾಗಿ ತೆಗೆದುಕೊಂಡರೆ ಮತ್ತೆ ಕೆಲವರು ವೃತ್ತಿಪರವಾಗಿ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ಸಹ ಕ್ರೀಡಾ ಪ್ರೊತ್ಸಾಹ ಸಿಗುತ್ತದೆ ಎಂದು ತಿಳಿಸಿದರು.

ಎಸ್ ಆರ್ ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ವಿ. ದೇವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧೆ ಇದ್ದರೆ ಕ್ರೀಡೆಗೆ ಮತ್ತಷ್ಟು ಹುಮ್ಮಸ್ಸು. ಕಳೆದ ದಿನಗಳಲ್ಲಿ ಕೋವಿಡ್ ಕಾರಣದಿಂದ ಪಂದ್ಯಾವಳಿಗಳು ನಡೆಯಲಿಲ್ಲ. ಈಗ ಮತ್ತೆ ಕ್ರೀಡಾತ್ಮಕವಾಗಿ ಹಾಗೂ ಮನರಂಜನಾ ದೃಷ್ಟಿಯಿಂದ ಕ್ರೀಡೆಗಳಿಗೆ ಚಾಲನೆ ನೀಡಲಾಗುತ್ತಿದೆ. ವಿಜಯಪುರ ಪಟ್ಟಣದಲ್ಲಿ ಕ್ರೀಡಾ ಪ್ರೋತ್ಸಾಹಕರು ಹೆಚ್ಚಿದ್ದು, ಪ್ರತಿಯೊಬ್ಬರೂ ಕ್ರೀಡೆಗಳಿಗೆ ಸಹಕಾರ ನೀಡಿತ್ತಿರುವುದು ಸಂತಸಕರ ವಿಚಾರ ಎಂದು ತಿಳಿಸಿದರು.

ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾ ಸಂಸ್ಥಾನ ಪೀಠದ ಶ್ರೀ ಬಾಲಯೋಗಿ ಶ್ರೀ ಸಾಯಿಮಂಜುನಾಥ್ ಮಹಾರಾಜ್ ಸ್ವಾಮಿ ಮಾತನಾಡಿ, ಕ್ರೀಡೆಗಳು
ಮನಸ್ಸಿಗೆ ಆಹ್ಲಾದ ನೀಡುವ ಜೊತೆಗೆ ದೇಹಕ್ಕೆ ವ್ಯಾಯಾಮವು ದೊರಕಿಸಿಕೊಡುವ ಪಂದ್ಯಾವಳಿಗಳು ಯುವ ಸಮೂಹವನ್ನು ಸದಾ ಚಟುವಟಿಕೆ ಇಂದ ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಇಂತಹ ಪಂದ್ಯಾವಳಿಯ ಆಯೋಜಕರು, ಮಾಲೀಕರು ಹಾಗೂ ಆಟಗಾರರು ಸದಾ ಸ್ಪೂರ್ತಿ ನೀಡುವ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿರಲಿ ಎಂದು ಆಶಿಸುತ್ತೇನೆ ಎಂದು
ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶ್ರೀನಿವಾಸ್, ಕ್ರೀಡಾ ಮತ್ತು ಸಂಸ್ಕೃತ ಇಲಾಖೆಯ ಗೀತಾ, ಟಿ.ಟಿ.ಡಿ ನಿರ್ದೇಶಕ ಎಂ.ಎನ್.ಶಶಿಧರ್, ಚಿಕ್ಕಬಳ್ಳಾಪುರ ಜಿಲ್ಲಾ ಬಿ.ಜೆ.ಪಿ.ಕಾರ್ಯದರ್ಶಿ ಅಶೋಕ್, ಮಾಹಿತಿ ತಂತ್ರಜ್ಞಾನ ಮಧುರಾಮಮೂರ್ತಿ, ಪೋಶೆಟ್ಟಹಳ್ಳಿ, ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ, ಪುರಸಭಾ ಮಾಜಿ ಸದಸ್ಯ ಶ್ರೀನಿವಾಸ್, ಮುಖ್ಯಾಧಿಕಾರಿ ಮೋಹನ್ ಕುಮಾರ್ ಎಸ್.ಆರ್.ಎಸ್ ಟ್ರಸ್ಟ್ ಸದಸ್ಯರು ಹಾಗೂ ಎಸ್.ಆರ್.ಎಸ್ ಯುವಕರು ಹಾಗೂ ಇತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top