ಬಳ್ಳಾರಿ.ಫೆಬ್ರವರಿ,26 : ಯುದ್ಧ ಪೀಡಿತ ಯುಕ್ರೇನಿನ ಕುರಿತ ಸುದ್ದಿಗಳು, ಭಾವಚಿತ್ರಗಳು ಇಡಿಯ ವಿಶ್ವವನ್ನೇ ಅಲುಗಾಡಿಸುತ್ತಿದೆ. ಕೆಲವೇ ನಿಮಿಷಗಳಲ್ಲಿ ಅಲ್ಲಿನ ನೂರಾರು ಜನ ಸಾವನ್ನಪ್ಪಿದರು, ಗಾಯಗೊಂಡರು ಮತ್ತು ಮನೆ ಮಠ ಕಳೆದುಕೊಂಡರು. ಯು.ಎಸ್. ಸಾಮ್ರಾಜ್ಯಶಾಹಿ ಮತ್ತು ರಷ್ಯಾ ಸಾಮ್ರಾಜ್ಯಶಾಹಿ ನಡುವಣ ಸಂಘರ್ಷದ ಪರಿಣಾಮವಾಗಿ ಯುಕ್ರೇನಿನಲ್ಲಿ ಈ ದಯನೀಯ ಪರಿಸ್ಥಿತಿ ಉಂಟಾಗಿದೆ. ಈ ಯುದ್ಧವು, ಬಿಕ್ಕಟ್ಟಿನಲ್ಲಿ ಇರುವ ಬಂಡವಾಳಶಾಹಿ ವ್ಯವಸ್ಥೆಯು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ತಂತ್ರವಲ್ಲದೆ ಬೇರೇನೂ ಅಲ್ಲ. ಪ್ರಪಂಚದಾದ್ಯಂತ ನಿರುದ್ಯೋಗ, ಹಿಂಬಡ್ತಿ, ಶಿಕ್ಷಣದ ವ್ಯಾಪಾರೀಕರಣ, ಸಾರ್ವಜನಿಕ ಭದ್ರತೆ ಮುಂತಾದ ಸಮಸ್ಯೆಗಳ ವಿರುದ್ಧ ಜನಾಕ್ರೋಶ ಬೆಳೆದು, ಪ್ರಸ್ತುತ ವ್ಯವಸ್ಥೆಯ ವಿರುದ್ಧ ಜನ ಭುಗಿಲೇಳುತ್ತಿದ್ದಾರೆ. ಆದರೆ, ಯುದ್ಧದ ಹೆಸರಿನಲ್ಲಿ ಜನರ ಗಮನವನ್ನು ಬೇರೆಡೆ ಸೆಳೆಯುವ ಕುಟಿಲ ಪ್ರಯತ್ನ ಇದಾಗಿದೆ.
ಈ ಯುದ್ಧದಿಂದ ಜನಗಳಿಗೆ ಯಾವುದೇ ಪ್ರಯೋಜನ ಇಲ್ಲ, ಬದಲಿಗೆ ನಾವು ನಮ್ಮ ಜೀವವನ್ನು ಮತ್ತು ಎಲ್ಲ ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಯುದ್ಧದ ಬಿಸಿ ತಟ್ಟುವುದು ಜನಸಾಮಾನ್ಯರಿಗೆ ಹೊರತು ಇನ್ಯಾರಿಗೂ ಅಲ್ಲ. ಯುದ್ಧವು ಶಿಕ್ಷಣ, ವ್ಯಾಪಾರ ಮತ್ತು ವಾಣಿಜ್ಯ, ಆಸ್ಪತ್ರೆಗಳು ಹಾಗೂ ಇತರ ದೈನಂದಿನ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಯುದ್ಧವನ್ನು AIDSO ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಮತ್ತು ವಿಶ್ವದ ಎಲ್ಲ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು, ಪ್ರಮುಖವಾಗಿ ಭಾರತದ ವಿದ್ಯಾರ್ಥಿಗಳು, ಜನಸಾಮಾನ್ಯರು ಇದರ ವಿರುದ್ಧ ಧ್ವನಿ ಎತ್ತಿ, ಯುದ್ಧ ವಿರೋಧಿ ಮತ್ತು ಶಾಂತಿ ಕಾಪಾಡುವ ಪ್ರಬಲ ಚಳುವಳಿಗಳನ್ನು ಕಟ್ಟಲು ಸಜ್ಜಾಗಬೇಕು ಎಂದು ಕರೆ ಕೊಡುತ್ತದೆ. ಇದರೊಂದಿಗೆ, ಯುಕ್ರೇನಿನಲ್ಲಿ ಸಿಲುಕಿರುವ ಭಾರತೀಯರು ಮತ್ತು ವಿದ್ಯಾರ್ಥಿಗಳ ಭದ್ರತೆ ಮತ್ತು ಅವರು ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಲು ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು AIDSO ಆಗ್ರಹಿಸುತ್ತದೆ.