ಕೊಟ್ಟೂರು,ಫೆ,26 : ನಾಡಿನ ಲಕ್ಷಾಂತರ ಭಕ್ತರ ಅರಾಧ್ಯ ದೈವ ಶ್ರೀ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವವು ಶುಕ್ರವಾರ ಸಂಜೆ 5ಗಂಟೆಗೆ ನಿಷೇಧದ ನಡುವೆಯೂ ವಿಜೃಂಭಣೆಯಿಂದ ನಡುವೆಯ ನಡೆಯಿತು. ಭವ್ಯವಾದ ರಥದಲ್ಲಿ ಉತ್ಸವ ಮೂರ್ತಿ ಕೊಟ್ಟೂರೇಶ್ವರ ಸ್ವಾಮಿಯೂ ಕುಳಿತುಕೊಂಡ ಕೆಲವೇ ಕ್ಷಣದಲ್ಲಿ ಮೂಲ ನಕ್ಷತ್ರ ಕೂಡುವ ಸಮಯದಲ್ಲಿ ರಥವು ಚಲಿಸಲು ಆರಂಭಿಸಿದಾಗ ಭಕ್ತರು ಜೈಘೋಷ ಮುಗಿಲು ಮುಟ್ಟುವಂತಿತ್ತು. ಉತ್ಸವಕ್ಕೂ ಮೊದಲು ಹಿರೇಮಠದಲ್ಲಿ ಶ್ರೀ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ಸಂಜೆ 5ರ ವೇಳೆಗೆ ಉತ್ಸವಮೂರ್ತಿಯನ್ನು ಅರ್ಚಕರು ಹೊರತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು.
ನಂತರ ಮೆರವಣಿಗೆ ನಡೆಯಿತು. ರಥೋತ್ಸವಕ್ಕೂ ಮುಂಚೆ ಹಿರೆಮಠದಿಂದ ಪಲ್ಲಕ್ಕಿ ಮೂಲಕ ರಥದ ಬಳಿ ಕೊಟ್ಟೂರೇಶ್ವರ ಉತ್ಸವ ಮೂರ್ತಿಯನ್ನು ರಥದ ಬಳಿ ಕರೆತರುವಾಗ ಗಾಂಧಿ ವೃತ್ತದಲ್ಲಿ ಅಂಬೇಡ್ಕರ್ ನಗರದ ದಲಿತ ಮಹಿಳೆ ಹಿರೇಮನಿ ದುರುಗಮ್ಮ ಕಳಸ ತಂದು ದೂಪದರತಿ ಬೆಳಗಿದರು, ನಂತರ ಪಲ್ಲಕ್ಕಿಯು ಮುಖ್ಯಬೀದಿಯಿಂದ ತೇರು ಬಜಾರ್ ಮೂಲಕ ತೇರು ಬಯಲು ತಲುಪುತಿದ್ದಂತೆಯೇ ರಥದ ಸುತ್ತಲು ಧರ್ಮಕರ್ತರು 5 ಸುತ್ತು ಪ್ರದಕ್ಷಿಣೆ ಹಾಕಿ ನಂತರ ರಥದ ಒಳಗೆ ಕೊಂಡೊಯ್ದರು. ಮೂಲಾ ನಕ್ಷತ್ರದ ಗಳಿಗೆಯಲ್ಲಿ ರಥವು ತೇರು ಬಯಲುದ್ದಕ್ಕೂ ಸಾಗುತ್ತಿದ್ದಂತೆ ಭಕ್ತರು, ‘ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಎಂದವರ ಅಜ್ಞಾನ ಅರಿಯೇ..ಬಹುಪರಾಕ್’ ಎಂಬ ಜಯಘೋಷದೊಂದಿಗೆ ರಥವನ್ನು ಎಳೆದರು. ಹಗರಿ ಬೊಮ್ಮನಹಳ್ಳಿ ಶಾಸಕ ಎಸ್.ಭೀಮನಾಯ್ಕ್, ಹರಪನಹಳ್ಳಿ ವಿಭಾಗೀಯ ಸಹಾಯ ಆಯುಕ್ತರಾದ ಚಂದ್ರಶೇಖರಯ್ಯ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಾದ ಯು.ಎಂ.ಪ್ರಕಾಶ್ ರಾವ್, ಜಿ.ಪಂ.ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ್, ದೇವಸ್ಥಾನದ ಪ್ರಧಾನ ಧರ್ಮಕರ್ತ ಸಿ.ಎಚ್.ಎಂ.ಗಂಗಾಧರಯ್ಯ ಮುಂತಾದವರು. ಇದ್ದರು.