ಬೆಂಗಳೂರು : ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದಿರುವ ಸಚಿವ ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ಕಿತ್ತೆಸೆಯುವವರಿಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದ್ದು,ಈ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಡೆಸಿದ ಸಂಧಾನ ಸಭೆಯೂ ವಿಫಲಗೊಂಡಿದೆ.
ಆ ಮೂಲಕ ಈಶ್ವರಪ್ಪ ವಿರುದ್ಧ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಕಾಂಗ್ರೆಸ್ ತೀರ್ಮಾನ ಮುಂದುವರಿದಿದೆ.ಬುಧವಾರ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಹಿನ್ನೆಲೆಯಲ್ಲಿ ಇಂದು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಜತೆ ಸಂಧಾನ ಸಭೆ ನಡೆಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಾದರು.ಆದರೆ ಸಂಧಾನ ಸಭೆಯಲ್ಲಿ ಸ್ಪೀಕರ್ ಮಾತಿಗೆ ಸಹಮತ ವ್ಯಕ್ತಪಡಿಸದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ:ಯಾವ ಕಾರಣಕ್ಕೂ ಈಶ್ವರಪ್ಪ ಅವರನ್ನು ಸಹಿಸಿಕೊಳ್ಳುವ ಪ್ರಶ್ನಯೇ ಇಲ್ಲ ಎಂದು ಪಟ್ಟು ಹಿಡಿದರು.ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಅವರು ಹೇಳಿರುವುದು ಸ್ಪಷ್ಟವಾಗಿದೆ.ಆದರೆ ಆ ರೀತಿ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಳ್ಳುವುದೇ ತಪ್ಪು.ಹೀಗೆ ತಪ್ಪು ಮಾಡಿದ ಈಶ್ವರಪ್ಪನವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.
ಈಶ್ವರಪ್ಪ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದು ಏಕೆ ಅಂತ ನಮಗೆ ಗೊತ್ತಿದೆ.ಹೀಗಾಗಿ ಅದರ ವಿರುದ್ಧ ಮಾತನಾಡಿದ್ದಾರೆ.ಹೀಗೆ ಮಾತನಾಡಿಯೂ ಅವರು ಸಚಿವ ಸಂಪುಟದಲ್ಲಿ ಮುಂದುರಿಯುತ್ತಾರೆ ಎಂದೆ ಅದಕ್ಕಿಂತ ವಿಪರ್ಯಾಸ ಬೇರೆ ಇಲ್ಲ ಎಂದರು.ಸಚಿವ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಗಳು ಮೊದಲು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು,ಅಲ್ಲಿಯವರೆಗೆ ಯಾವ ಸಂಧಾನದ ಅವಶ್ಯತೆಯೂ ಇಲ್ಲ ಎಂದು ಸಿದ್ಧರಾಮಯ್ಯ ನುಡಿದರು.ಹೀಗೆ ತಾವು ನಡೆಸಿದ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಗೆ ಬಂದರಲ್ಲದೆ,ಮೊದಲು ತೀರಿಕೊಂಡ ಹಿರಿಯ ನಾಯಕ ಮಳ್ಲೂರು ಆನಂದರಾವ್ ಅವರ ಬಗ್ಗೆ ಸಂತಾಪ ಸೂಚಕ ನಿರ್ಣಯವನ್ನು ಕೈಗೊಳ್ಳಲು ಮುಂದಾದರು.ಅವರು ಸದನದ ಮುಂದೆ ಮಂಡಿಸಿದ ಸಂತಾಪ ಸೂಚಕ ನಿರ್ಣಯದ ಮೇಲೆ ಕಾಂಗ್ರೆಸ್ ಚರ್ಚೆ ನಡೆಸಿತಾದರೂ,ತದ ನಂತರ ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದು ತನ್ನ ಧರಣಿ ಮುಂದುವರಿಸಿತು.ಈ ಹಂತದಲ್ಲಿ ಪುನ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,ಧರಣಿಯನ್ನು ಹಿಂಪಡೆದು ನಿಮ್ಮ ನಿಮ್ಮ ಸ್ಥಾನಗಳಿಗೆ ಹಿಂತಿರುಗಿ ಎಂದು ಮನವಿ ಮಾಡಿಕೊಂಡರಾದರೂ ಕಾಂಗ್ರೆಸ್ ಸದಸ್ಯರು ಅದನ್ನೊಪ್ಪಲಿಲ್ಲ.ಬದಲಿಗೆ,ಏರಿದ ಧ್ವನಿಯಲ್ಲಿ ಸಚಿವ ಈಶ್ವರಪ್ಪ ಅವರ ವಿರುದ್ಧ ಘೋಷಣೆಗಳನ್ನು ಮೊಳಗಿಸುತ್ತಾ,ಡೌನ್ ಡೌನ್ ಈಶ್ವರಪ್ಪ,ದೇಶದ್ರೋಹಿ ಈಶ್ವರಪ್ಪ,ದೇಶದ ಧ್ವಜವನ್ನು ಅಪಮಾನಿಸಿದ ಈಶ್ವರಪ್ಪ ಯಾವ ಕಾರಣಕ್ಕೂ ಮಂತ್ರಿ ಮಂಡಲದಲ್ಲಿ ಮುಂದುವರಿಯಬಾರದು ಎಂದು ಕೂಗತೊಡಗಿದರು.
ಈ ಹಂತದಲ್ಲಿ ಬೇರೆ ದಾರಿ ಕಾಣದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿದರು.ಮಧ್ಯೆ,ಮಧ್ಯೆ ಪ್ರಶ್ನೆ ಕೇಳುವವರ ಪಟ್ಟಿಯಲ್ಲಿ ಕಾಂಗ್ರೆಸ್ ಸದಸ್ಯರು ಇದ್ದಾಗ,ನಿಮ್ಮ ನಿಮ್ಮ ಸ್ಥಾನಗಳಿಗೆ ಹಿಂತಿರುಗಿ ಪ್ರಶ್ನೆ ಕೇಳಿ,ನಿಮ್ಮ ಕ್ಷೇತ್ರದ ಸಮಸ್ಯೆಗಳ ಕುರಿತು ಪ್ರಶ್ನೆಯನ್ನೂ ಕೇಳದಿದ್ದರೆ ಜನ ನಿಮ್ಮ ಬಗ್ಗೆ ಬೇಸರಗೊಳ್ಳುತ್ತಾರೆ ಎನ್ನುತ್ತಿದ್ದರಾದರೂ,ಧರಣಿ ನಿರತ ಕಾಂಗ್ರೆಸ್ ಸದಸ್ಯರು ಇದನ್ನೊಪ್ಪಲಿಲ್ಲ.ಇದರ ನಡುವೆಯೇ ಪ್ರಶ್ನೋತ್ತರ ಕಲಾಪ ಮುಂದುವರಿದು ಮುಕ್ತಾಯವಾಯಿತಲ್ಲದೆ ಸದನದಲ್ಲಿ ಲಿಖಿತವಾಗಿ ಉತ್ತರಿಸುವ ಪ್ರಶ್ನೆಗಳ ಪಟ್ಟಿ ಮಂಡನೆಯಾಯಿತು.ನಂತರ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ಕಾಯ್ದೆ ಮಂಡನೆಯಾಗಿ ಸದನದಲ್ಲಿ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಿತು.ಆನಂತರ ಸದನದ ಕಾರ್ಯಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತಾದರೂ ಕಾಂಗ್ರೆಸ್ ಪಕ್ಷ ತನ್ನ ಪ್ರತಿಭಟನೆಯ ತೀರ್ಮಾನದಿಂದ ಹಿಂದೆ ಸರಿಯಲಿಲ್ಲ