ದಾವಣಗೆರೆ: ಹಿರಿಯ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸುವ ಒಂದು ಸಾರ್ವಜನಿಕ ವೇದಿಕೆಯಾಗಿ 14567 ಸಹಾಯವಾಣಿ ಸಂಖ್ಯೆಯನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣಾಧಿಕಾರಿ ಕೆ. ಕೆ. ಪ್ರಕಾಶ್ ತಿಳಿಸಿದ್ದಾರೆ.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರೂಪುಗೊಳಿಸಿರುವ ಒಂದು ಮಹತ್ವಪೂರ್ಣ ಯೋಜನೆಯಾದ ಸಹಾಯವಾಣಿ ಸಂಖ್ಯೆ 14567 ಕ್ಕೆ ಕರೆ ಮಾಡುವ ಹಿರಿಯ ನಾಗರಿಕರಿಗೆ ಕೋವಿಡ್ ಸಂಬಂಧಿತ ವಿಷಯಗಳ ಕುರಿತು ಮಾಹಿತಿ, ಆಸ್ಪತ್ರೆ, ವೃದ್ಧಾಶ್ರಮಗಳು, ಆರೈಕೆ ಕೇಂದ್ರಗಳು, ಹಗಲು ಯೋಗಕ್ಷೇಮ ಕೇಂದ್ರಗಳು ಹಾಗೂ ಇತ್ಯಾದಿ ವಿಚಾರಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಹಿರಿಯ ನಾಗರಿಕರಿಗೆ ಇರುವ ಸರ್ಕಾರಿ ಸೌಲಭ್ಯಗಳ ಬಗ್ಗೆ, ಪಿಂಚಣಿ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡುವುದಲ್ಲದೇ ಹಿರಿಯ ನಾಗರಿಕರ ಪಾಲನೆ ಪೋಷಣೆ ಕಾಯ್ದೆ ಬಗ್ಗೆ ಮತ್ತು ಕಾನೂನಾತ್ಮಕ ಸಮಸ್ಯೆಗಳ ಬಗ್ಗೆಯು ಮಾರ್ಗದರ್ಶನ ನೀಡಲಾಗುವುದು. ಭಾವನಾತ್ಮಕ ಬೆಂಬಲ ಹಾಗೂ ನಿಂದನೆಗೊಳಪಟ್ಟ, ಪರಿತ್ಯಜಿಸಲ್ಪಟ್ಟ ಹಿರಿಯರನ್ನು ರಕ್ಷಿಸುವುದು ಮತ್ತು ಅಂತಹ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇತ್ಯರ್ಥಗೊಳಿಸುವ ಸೇವೆಗಳನ್ನು ಒದಗಿಸಲಾಗುವುದು. ಇದರ ಸದುಪಯೋಗವನ್ನು ಜಿಲ್ಲೆಯ ಹಿರಿಯ ನಾಗರಿಕರು ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 14ನೇ ಮುಖ್ಯ ರಸ್ತೆ, ಎಂ.ಸಿಸಿ. ‘ಬಿ’ ಬ್ಲಾಕ್, ಶಂಕರಲೀಲಾ ಗ್ಯಾಸ್ ಏಜೆನ್ಸಿ ಹತ್ತಿರ, ಕುವೆಂಪುನಗರ, ದಾವಣಗೆರೆ 577004 ಅಥವಾ ದೂರವಾಣಿ ಸಂಖ್ಯೆ 08192-263936 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.