ದಾವಣಗೆರೆ,ಜ,31 ; ಇಲ್ಲಿಗೆ ಸಮೀಪದ ಹೊಸ ಕುಂದುವಾಡ ಗ್ರಾಮದ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ಸಿ.ಸಿ. ರಸ್ತೆ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದ್ದು, ಬಿಲ್ಲುಗಳನ್ನು ತಡೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದಾವಣಗೆರೆಯ ೪೩ನೇ ವಾರ್ಡ್ ನ ಹೊಸ ಕುಂದವಾಡದಲ್ಲಿ ಮೊದಲ ಬಾರಿಗೆ ಊರಿಗೆ ರಸ್ತೆಯಾಗುತ್ತಿದ್ದು, ಅದನ್ನಾದರೂ ಗುಣಮಟ್ಟದಲ್ಲಿ ಮಾಡುವ ಬದಲು ಅಸಮರ್ಪಕ ಮೆಟ್ಲಿಂಗ್, ಗುಣಮಟ್ಟದ ವಸ್ತುಗಳನ್ನು ಸಿಸಿ ರಸ್ತೆ ಕಾಮಗಾರಿಗೆ ಉಪಯೋಗಿಸದ ಕಾರಣ ರಸ್ತೆಗೆ ಹಾಕಿರುವ ಕಾಂಕ್ರೀಟ್ ಕೈಯಿಂದ ಮುಟ್ಟಿದರೆ ಪುಡಿ ಪುಡಿಯಾಗುತ್ತಿರುವುದೇ ಅವೈಜ್ಞಾನಿಕ ಕಾಮಗಾರಿಗೆ ಹಿಡಿದ ಕೈ ಗನ್ನಡಿಯಾಗಿದೆ. ಹೊಸದಾಗಿ ನಿರ್ಮಿಸುತ್ತಿರುವ ಸಿಸಿ ರಸ್ತೆಯ ಎರಡೂ ಬದಿಯಲ್ಲಿರುವ ಹಳೇಯ ಬಾಕ್ಸ್ ಚರಂಡಿಗಳನ್ನು ಪುನರ್ ನಿರ್ಮಿಸದೇ ಹಾಗೆಯೇ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
೯೫೦ ಮೀಟರ್ ರಸ್ತೆಗೆ ಒಟ್ಟು ೧ ಕೋಟಿ ರೂಪಾಯಿಗೂ ಹೆಚ್ಚು ವ್ಯಯ ಮಾಡುತ್ತಿರುವ ದುರಂತದ ಸಂಗತಿ. ಕೇವಲ ೬೦ ಲಕ್ಷ ರೂಪಾಯಿಗಳಲ್ಲಿ ಆಗಬೇಕಿದ್ದ ಕಾಮಗಾರಿಗೆ ೧ ಕೋಟಿ ರೂಪಾಯಿಗೂ ಹೆಚ್ಚು ವ್ಯಯ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳು ಸರ್ಕಾರದ ಹಣ ದೋಚಲು ಅವೈಜ್ಞಾನಿಕ, ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಕಾಮಗಾರಿಯನ್ನು ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಮಾಡದೆ ತರಾತುರಿಯಲ್ಲಿ ಪೂರ್ಣಗೊಳಿಸುತ್ತಿದ್ದಾರೆ. ಕಾಮಗಾರಿ ವೀಕ್ಷಣೆಗೆ ಯಾವುದೇ ಅಧಿಕಾರಿಗಳು ಬಂದು ಕಾಮಗಾರಿಯ ಪರಿಶೀಲನೆ ಮಾಡಿಲ್ಲ. ಆದ್ದರಿಂದ ಈ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಹಾಗೂ ಗುಣಮಟ್ಟದ ಕಾಮಗಾರಿಯನ್ನು ಮಾಡಲು ಆದೇಶಿಸಬೇಕು. ಈಗಾಗಲೇ ಆಗಿರುವ ಕಾಮಗಾರಿಯ ಬಿಲ್ಲನ್ನು ತಡೆ ಹಿಡಿಯಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸುದ್ದಿ ಮಾಧ್ಯಮದ ಮೂಲಕ ಗ್ರಾಮಸ್ಥರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂತೋಷ, ಚನ್ನಬಸಪ್ಪ, ರಾಘವೇಂದ್ರ, ರಾಘು,ಬೊಮ್ಮಾ, ಸಚಿನ್, ಕರಿಯಪ್ಪ ಸೇರಿದಂತೆ ಇತರರು ಇದ್ದರು.