ಮಂಗಳೂರು, ಜನವರಿ 30 : ಬ್ಯಾಂಕುಗಳ ತೊಟ್ಟಿಲು ಎಂದೇ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಸ್ವಂತ ಕಟ್ಟಡ “ಆತ್ಮಶಕ್ತಿ ಸೌಧ”ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಹಕಾರ ಸಂಘಗಳು ಆರ್ಥಿಕ ವ್ಯವಹಾರದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತುಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸುತ್ತಿರುವುದರಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಮುಂಚೂಣಿಯಲ್ಲಿದೆ ಎಂದರು.
ಸಂಘ ಆರಂಭವಾದ ಹತ್ತು ವರ್ಷಗಳಲ್ಲಿ ಜಿಲ್ಲೆಯಾದ್ಯಂತ 20 ಶಾಖೆಗಳನ್ನು ತೆರೆದು 858 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅದರಲ್ಲೂ 20 ಶಾಖೆಗಳಲ್ಲಿ ಮಹಿಳೆಯರೇ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಸಹಕಾರ ಸಂಘದ ಎಲ್ಲಾ ಶಾಖೆಗಳಲ್ಲಿ ಮಹಿಳೆಯರೇ ಶಾಖಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಘ ಎಂದರೆ ಅದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಎಂದು ಹೇಳಿದರು. ಇದೇ ವೇಳೆ ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿ ಅವರ ಶಿಸ್ತು ಮತ್ತು ಕಾರ್ಯವೈಖರಿಯನ್ನು ಸ್ಮರಿಸಿದ ಸಚಿವರು, ಕೇವಲ ಹತ್ತು ವರ್ಷದಲ್ಲಿ ಸಂಘ ಇಷ್ಟೊಂದು ಬೃಹದ್ದಾಕಾರವಾಗಿ ಬೆಳೆಯಲು ಸಂಘದ ಆಡಳಿತ ಮಂಡಳಿಯ ಶ್ರಮ ಮತ್ತು ಶಿಸ್ತು ಕಾರಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಉಮನಾಥ ಕೋಟ್ಯಾನ್, ಬ್ಯಾಂಕಿನ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.