ಕೊಪ್ಪಳ,: ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಿದ್ದಕ್ಕೆ ಯಾವ ಅಸಮಾಧಾನವೂ ಇಲ್ಲ, ಬೇಕಾದರೆ ಮಂಪರು ಪರೀಕ್ಷೆ ಮಾಡಿಸಿದರೆ ಇದೇ ಉತ್ತರ ಬರುತ್ತದೆ ಎಂದು ರಾಜ್ಯ ಸರ್ಕಾರದ ಪ್ರವಾಸೋದ್ಯೊಮ, ಪರಿಸರ ಮತ್ತು ಜೀವಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ್ ಸಿಂಗ್ ಹೇಳಿದರು. ಬುಧವಾರ ದಂದು ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ ಸಚಿವ ಆನಂದ್ ಸಿಂಗ್ ಅವರು ನಗರದ ಶ್ರೀಗವಿಮಠಕ್ಕೆ ಭೇಟಿ ನೀಡಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಗದ್ದುಗೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಕ್ಕೆ ಯಾವ ಅಸಮಾಧಾನವೂ ಇಲ್ಲ ಅಂತ ಸಾಕಷ್ಟು ಸಲ ಹೇಳಿದ್ದೇನೆ. ಬೇಕಾದರೆ ಮಂಪರು ಪರೀಕ್ಷೆ ಮಾಡಿಸಿ, ಆಗಲೂ ಇದನ್ನೇ ಹೇಳುತ್ತೇನೆ ಎಂದರು.
ಬಿಜೆಪಿ ಪಕ್ಷದಿಂದ ಯಾರು ಕಾಂಗ್ರೆಸ್ಗೆ ಹೋಗಲ್ಲ ಬಂದರೆ ಕಾಂಗ್ರೆಸ್ನವರೇ ಬಿಜೆಪಿ ಪಕ್ಷಕ್ಕೆ ಬರಬಹುದು. ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ದೇಶದ ಜನರಿಗೆ ಗೊತ್ತಿದೆ. ಬಿಜೆಪಿಯವರು ಕಾಂಗ್ರೆಸ್ಗೆ ಹೋಗ್ತಾರೆ ಅನ್ನೋದು ಬಸನಗೌಡ ಯತ್ನಾಳ ಅವರ ಅಭಿಪ್ರಾಯ ಇರಬಹುದು, ನನ್ನ ಅಭಿಪ್ರಾಯದಲ್ಲಿ ಬಿಜೆಪಿಯವರು ಯಾರೂ ಕಾಂಗ್ರೆಸ್ಗೆ ಹೋಗಲ್ಲ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ನಗರಾಭಿವೃದ್ಧಿ ಪ್ರಾಧಿಕಾರ ಅದ್ಯಕ್ಷ ಮಹಾಂತೇಶ ಪಾಟೀಲ್,
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಮುಖಂಡರಾದ ಚಂದ್ರಶೇಖರ ಪಾಟೀಲ ಹಲಗೇರಿ, ಗವಿಸಿದ್ದಪ್ಪ ಕರಡಿ ಸೇರಿದಂತೆ ಇತರರು ಇದ್ದರು.