ದಾವಣಗೆರೆ,ಡಿ,30 : ತಾಲ್ಲೂಕಿನ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿ, ರಾಗಿ ಹಾಗೂ ಭತ್ತವನ್ನು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಹಾಯಕ ನಿರ್ದೇಶಕರು ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದು, ಈ ಧಾನ್ಯವನ್ನು ಜ. 06 ಹಾಗೂ ಜ. 11 ರಂದು ಬೆ. 10.30 ಕ್ಕೆ ದಾವಣಗೆರೆಯ ಎಪಿಎಂಸಿ ಆವರಣದಲ್ಲಿನ ಕೆಎಸ್ಸಿಎಫ್ಸಿ ಬಹಿರಂಗ ಹರಾಜು ಹಾಕಲಾಗುವುದು. ಸಗಟು ಮಳಿಗೆ 2 ರಲ್ಲಿ ಬಹಿರಂಗ ಹರಾಜು ಮಾಡಲಾಗುತ್ತಿದ್ದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.ದಾವಣಗೆರೆ ಅನೌಪಚಾರಿಕ ಪಡಿತರ ಪ್ರದೇಶದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದ ರಸ್ತೆಯಲ್ಲಿ ಕಳೆದ ಜು.27 ರಂದು ಹರಿಹರದಿಂದ ಚಿತ್ರದುರ್ಗ ಕಡೆಗೆ ಸಾಗುತ್ತಿದ್ದ ಅಶೋಕ ಲೈಲ್ಯಾಂಡ್ ವಿಕೋಮೇಟ್ 2 ಲಾರಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 363.65 ಕ್ವಿಂ. ಅಕ್ಕಿ ಹಾಗೂ 11.05 ಕ್ವಿಂ. ಭತ್ತ ಪತ್ತೆಹಚ್ಚಿ ಜಪ್ತಿ ಮಾಡಿಕೊಳ್ಳಲಾಗಿತ್ತು. ಕಳೆದ ಸೆ. 24 ರಂದು ದಾವಣಗೆರೆಯಿಂದ ಚಿತ್ರದುರ್ಗ ಕಡೆ ಶ್ಯಾಮನೂರು ಸರ್ವಿಸ್ ರಸ್ತೆ ಮೂಲಕ ಸಾಗುತ್ತಿದ್ದ ಅಶೋಕ್ ಲೈಲ್ಯಾಂಡ್ ಲಾರಿಯಲ್ಲಿ 216.30 ಕ್ವಿಂ. ರಾಗಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದರು. ಜಪ್ತಿ ಮಾಡಿಕೊಳ್ಳಲಾಗಿರುವ ಅಕ್ಕಿ, ಭತ್ತ ಮತ್ತು ರಾಗಿಯನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜ.06 ರಂದು ಬೆಳಿಗ್ಗೆ 10.30ಕ್ಕೆ ದಾವಣಗೆರೆಯ ಎಪಿಎಂಸಿ ಆವರಣದಲ್ಲಿನ ಕೆಎಸ್ಸಿಎಫ್ಸಿ ಸಗಟು ಮಳಿಗೆ 2 ರಲ್ಲಿ ಬಹಿರಂಗ ಹರಾಜು ಮಾಡಲಾಗುವುದು, ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.
ಅದೇ ರೀತಿ ಕಳೆದ ಅಕ್ಟೋಬರ್ 11 ರಂದು ದಾವಣಗೆರೆಯಿಂದ ಚಿತ್ರದುರ್ಗ ಕಡೆಗೆ ಸಾಗುತ್ತಿದ್ದ ಲಾರಿಯಲ್ಲಿ ಸಂಗ್ರಹಿಸಲಾಗಿದ್ದ 239.60 ಕ್ವಿಂ. ಅಕ್ಕಿ. ಹಾಗೂ ಕಳೆದ ಅಕ್ಟೋಬರ್ 20 ರಂದು ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಲಾರಿಯಲ್ಲಿ ಸಂಗ್ರಹಿಸಲಾಗಿದ್ದ 231.50 ಕ್ವಿಂ. ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದರು. ಜಪ್ತಿ ಮಾಡಿಕೊಳ್ಳಲಾಗಿರುವ ಅಕ್ಕಿ, ಭತ್ತ ಮತ್ತು ರಾಗಿಯನ್ನು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜ.11 ರಂದು ಬೆಳಿಗ್ಗೆ 10.30ಕ್ಕೆ ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಎಪಿಎಂಸಿ ಟ್ರೇಡ್ ಲೈಸೆನ್ಸ್ನೊಂದಿಗೆ ಹಾಜರಾಗಬೇಕು. ಬಿಡ್ಡುದಾರರು ಹರಾಜು ದಿನ ಒಂದು ಗಂಟೆ ಮುಂಚೆ ಬಂದು ಶೇ. 10 ರಷ್ಟು ಮೊಬಲಗನ್ನು ಮುಂಗಡ ಠೇವಣಿಯಾಗಿ ಇಡಬೇಕು. ತಪ್ಪಿದಲ್ಲಿ ಅಂತಹವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಹೆಚ್ಚಿನ ಮಾಹಿತಿಯನ್ನು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.