ದೇವನಹಳ್ಳಿ: ದೊಡ್ಮನೆ ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ರವರ ಅಕಾಲಿಕ ಮರಣ ತುಂಬಲಾರದ ನಷ್ಟವಾಗಿದೆ, ಕನ್ನಡ ಚಿತ್ರರಂಗದ ಯೂತ್ ಐಕಾನ್ ಎಂದೇ ಪ್ರಸಿದ್ಧರಾದವರು 46 ವರ್ಷ ಚಿತ್ರರಂಗದಲ್ಲಿ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ನಿಜವಾಗಿಯೂ ಬಡವಾಗಿದೆ. ಜನ್ಮಜಾತ ಪ್ರತಿಭೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದ ಪುನೀತ್ ರಾಜ್ ಕುಮಾರ್ ಅವರು ಮರೆಯಾಗಿರುವುದು ಯಾರಿಗೂ ನಂಬಲಸಾಧ್ಯವಾದದ್ದು ಎಂದು ನಟ ನಿರ್ಮಾಪಕ ನಾಗರಾಜ್ ತಿಳಿಸಿದರು. ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಸಾರ್ವಜನಿಕ ಸಂಪರ್ಕ ಕೇಂದ್ರ ಮತ್ತು ಭಾರತ ಜನಜಾಗೃತಿ ಸೇನೆ ವತಿಯಿಂದ ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಮರಣದಿಂದ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
1983 ರಲ್ಲಿ ಪುನೀತ್ ಅವರು ಎರಡು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು ಭಕ್ತ ಪ್ರಹ್ಲಾದ ಚಿತ್ರದಲ್ಲಿ , ಪ್ರಹ್ಲಾದನ ಪಾತ್ರ ನಿರ್ವಹಿಸಿ ತಂದೆಯ ಹಿರಣ್ಯ ಕಶ್ಯಪು ಪಾತ್ರಕ್ಕೆ ತನ್ನ ಸಮಬಲದ ಅಭಿನಯ ತೋರಿದ್ದರು. ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಎರಡನೇ ಬಾರಿ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಪಡೆದಿದ್ದರು.1984 ರಲ್ಲಿ ರಾಜ್‌ಕುಮಾರ್ ಅವರೊಂದಿಗೆ ಥ್ರಿಲ್ಲರ್ ಚಿತ್ರ ಯಾರಿವನು ನಟಿಸಿದರು, ಚಿತ್ರದಲ್ಲಿ ರಾಜನ್-ನಾಗೇಂದ್ರ ಬರೆದ “ಕಣ್ಣಿಗೆ ಕಾಣುವ ದೇವರು…” ಹಾಡನ್ನು ಹಾಡಿ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡರು ಪುನೀತ್ ರಾಜ್‍ಕುಮಾರ್ ರವರು ಎಂದು ಸಾರ್ವಜನಿಕ ಸಂಪರ್ಕ ಕೇಂದ್ರದ ಮುಖ್ಯಸ್ಥ ಸಹದೇಶ್ ತಿಳಿಸಿದರು.
ಬಾಲನಟನಾಗಿ 1985 ರಲ್ಲಿ ‘ಬೆಟ್ಟದ ಹೂವು’ ಚಿತ್ರದ ಮುಗ್ಧ ರಾಮು ಪಾತ್ರಕ್ಕಾಗಿ ಪುನೀತ್ ಅವರು 33 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದು ತಾನೊಬ್ಬ ಭವಿಷ್ಯದ ದೊಡ್ಡ ಪ್ರತಿಭೆ ಎನ್ನುವುದನ್ನು ತೋರಿದ್ದರು. ಹದಿಹರೆಯದಲ್ಲಿ ಶಿವ ಮೆಚ್ಚಿದ ಕಣ್ಣಪ್ಪ (1988) ದ ಲ್ಲಿ ತನ್ನ ಹಿರಿಯ ಸಹೋದರ ಶಿವರಾಜ್ ಕುಮಾರ್ ಅವರೊಂದಿಗೆ ಯುವ ಕಣ್ಣಪ್ಪನಾಗಿ ಕಾಣಿಸಿಕೊಂಡರು ಬಾಲನಟನಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ ಅವರು 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕನಾಗಿ ಭರ್ಜರಿ ಪುನರಾಗಮನ ಮಾಡಿದ್ದರು. ಚಿತ್ರ ದಲ್ಲಿ ರಕ್ಷಿತಾ ಅವರು ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು ಎಂದು ಭಾರತ ಜನಜಾಗೃತಿ ಸೇನೆಯ ರಾಜ್ಯಾಧ್ಯಕ್ಷ ಸಿ.ಮುನಿಯಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ವೆಂಕಟೇಶ್, ಮಂಜುನಾಥ್, ಚಲನಚಿತ್ರ ನಟ ಮಂಡಿಬೆಲೆ ಮುನೇಗೌಡ, ರಮೇಶ್, ವಿಶ್ವನಾಥ್, ಶ್ರೀನಿವಾಸ್, ಮೂರ್ತಿ, ಗುರುಸಿದ್ದಯ್ಯ ಮತ್ತಿತರರು ಇದ್ದರು.