ಕುಷ್ಟಗಿ: ನಿನ್ನೆ ಸಂಜೆ ೩.೩೦ರ ಸುಮಾರಿಗೆ ಸುರಿದ ಮಳೆಗೆ ಏಕಾ ಏಕಿಯಾಗಿ ಹರಿದ ಬಂದ ಹಳ್ಳದ ನೀರಿಗೆ ವಯೋವೃದ್ದ ಒಬ್ಬರು ಕೊಚ್ಚಿ ಹೋಗಿರುವ ಘಟನೆ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ನಡೆದಿದೆ. ಬುಡ್ನೆಸಾಬ್ ಅಗಸಿಮುಂದಿನ (65) ಹಳ್ಳದ ನೀರಿಗೆ ಬಲಿಯಾದ ವಯೋವೃದ್ದ. ಮೂಲತ ರೈತರ ಕುಟುಂಬದವರಾಗಿದ್ದು ಬುಡ್ನೆಸಾಬ್ ಹಿರೇಮನ್ನಾಪೂರ ಗ್ರಾಮದಿಂದ ಜುಮ್ಲಾಪೂರ ರಸ್ತೆಯಲ್ಲಿರುವ ಚಾಕ್ರಿ ಹಳ್ಳದ ಆಚೆ ಇರುವ ಜಮೀನಿಗೆ ಎತ್ತು ತೆಗೆದುಕೊಂಡು ಹೋಗಿದ್ದರು. ಮೋಡ ಕವಿಯುತ್ತಿದ್ದಂತೆ ಬುಡ್ನೆಸಾಬ್ ಮನೆಯತ್ತ ಎತ್ತಿನೊಂದಿಗೆ ಹೆಜ್ಜೆ ಹಾಕಿದ್ದರು. ಆ ವೇಳೆಗೆ ಒಂದೇ ಸಮನೆ ಸುರಿಯಲಾರಂಬಿಸಿತ್ತು. ಹೇಗೋ ಹಳ್ಳ ದಾಟಿಕೊಂಡರೆ ಮುಗಿಯಿತು ಎಂದು ಹಳ್ಳ ದಾಟುವ ದೈರ್ಯ ಮಾಡಿದ್ದರು. ಅವಸರದಿಂದಲೇ ಹಳ್ಳ ದಾಟುವ ಸಂಧರ್ಭದಲ್ಲಿ ಎತ್ತಿನ ಸಮೇತ ಹಳ್ಳದ ನೀರಿಗೆ ಕೊಚ್ಚಿ ಹೋಗಿದ್ದಾರೆ. ಆದರೆ ಎತ್ತು ಪಾರಾಗಿದ್ದು, ಬುಡ್ನೆಸಾಬ್ ಪ್ರವಾಹ ವಿರುದ್ದ ಈಜಲಾಗದೇ ಸಾವಿಗಿಡಾಗಿದ್ದಾರೆ.
ರೈತ ಬುಡ್ನೆಸಾಬ್ ವಾಪಸ್ಸು ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಪ್ರವಾಹ ತಗ್ಗಿದ ಬಳಿಕ ಬುಡ್ನೆಸಾಬ್ ಶವ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ತಹಶಿಲ್ದಾರ ಎಂ.ಸಿದ್ದೇಶ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ನೀಡುವ ಭರವಸೆ ನೀಡಿದರು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.