81 ಮಂದಿ ಖೈದಿಗಳಿಗೆ ಬಿಡುಗಡೆ ಭಾಗ್ಯ

ಬೆಂಗಳೂರು:  ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 81 ಮಂದಿ ಕೈದಿಗಳಿಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿತು. ಸನ್ನಡತೆಯ ಆಧಾರದಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 214 ಜನ ಕೈದಿಗಳನ್ನು ಬಿಡುಗಡೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ, ಜೀವಾವಧಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ 81 ಜನ ಕೈದಿಗಳನ್ನೂ ಇಂದು ಬಿಡುಗಡೆ ಮಾಡಲಾಯಿತು.

ಉತ್ತಮ ಸನ್ನಡತೆ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡುವಂತೆ ಸ್ಥಾಯಿ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರದ ಆದೇಶದಂತೆ ಕೈದಿಗಳಿಂದ ’ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ, ಕೆಟ್ಟ ವ್ಯಕ್ತಿಗಳ ಜೊತೆ ಸೇರುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಪ್ರಮಾಣ ಪತ್ರ ನೀಡಿ ಕಳುಹಿಸಲಾಗಿದೆ. ಮಂಗಳವಾರ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ ಒಟ್ಟು ಎಂಬತ್ತೊಂದು ಕೈದಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.

ಕಳೆದ ವರ್ಷ ಬಿಡುಗಡೆಯಾಗಿದ್ದ ಕೈದಿಗಳ ವಿವರ: ಕಳೆದ ವರ್ಷದ ಮಾರ್ಚ್ 12 ರಂದು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಮಂದಿ ಸಜಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಪಳನಿ, ಭೀಮನಗೌಡ, ರಾಚಪ್ಪ, ಜಗನ್ನಾಥ, ಸುರೇಶ್, ಮಹಾದೇವಿ ಭಡನೋರ್ ಸೇರಿ 18 ಜನರನ್ನು ಬಿಡುಗಡೆ ಮಾಡಲಾಗಿತ್ತು. ಜೀವಾವಧಿ ಶಿಕ್ಷೆಗೆ ಗುರಿಯಾಗಿ 14 ವರ್ಷಗಳ ಕಾಲ ಕಲಬುರಗಿ ಜಿಲ್ಲೆ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ ಬಂಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಸ್ಥಾಯಿ ಸಲಹಾ ಸಮಿತಿ ಶಿಫಾರಸಿನಂತೆ ಸರ್ಕಾರಕ್ಕೆ ಕಳಿಸಲಾಗಿತ್ತು.

Prisoners released for good conduct from Central Jail in Bengaluru

ಹಾಗೆಯೇ, 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಗಸ್ಟ್ 14 ರಂದು ಸನ್ನಡತೆ ಆಧಾರದ ಮೇಲೆ ವಿಜಯಪುರ ನಗರದ ಕೇಂದ್ರ ಕಾರಾಗೃಹದಿಂದ 10 ಮಂದಿ ಜೈಲು ಹಕ್ಕಿಗಳನ್ನು ಬಿಡುಗಡೆ ಮಾಡಲಾಗಿತ್ತು. ವಿವಿಧ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದರೂ ತಮ್ಮ ಸನ್ನಡತೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಕೈದಿಗಳಲ್ಲಿ ಮೂವರು ಸಹೋದರರು ಹಾಗೂ ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಇದ್ದರು.

ಜೈಲಿನಿಂದ ಬಿಡುಗಡೆಗೊಂಡು ಮನೆಗೆ ತೆರಳುತ್ತಿರುವ ಖೈದಿ: ಇನ್ನು 2019 ರಲ್ಲಿ ರಾಜ್ಯಾದ್ಯಂತ ಸನ್ನಡತೆ ತೋರಿದ 141 ಕೈದಿಗಳನ್ನು ರಾಜ್ಯಪಾಲರ ಅಂಕಿತದೊಂದಿಗೆ ಜೈಲಿನ ಮೇಲಾಧಿಕಾರಿಗಳು ಹಾಗೂ ಅಂದಿನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದ್ದರು. ರಾಜ್ಯದ7೭ ಕಾರಾಗೃಹಗಳಲ್ಲಿ ಶಿಕ್ಷೆ ಅನುಭವಿಸಿ ಜೈಲಿನಲ್ಲಿ ಸನ್ನಡತೆ, ಸಂಯಮ ತೋರಿದ ಕೈದಿಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ತೋರಿ ಬಿಡುಗಡೆಗೊಳಿಸಲಾಗಿತ್ತು.

Leave a Comment

Your email address will not be published. Required fields are marked *

Translate »
Scroll to Top