ಬೆಂಗಳೂರು: 24 ಗಂಟೆ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸಂಭವಿಸಿರುವ ರಸ್ತೆ ಅಪಘಾತಗಳಲ್ಲಿ 51 ಜನರು ಪ್ರಾಣ ಕಳೆದುಕೊಂಡಿರುವ ಸುದ್ದಿ ಓದಿ ನನಗೆ ಬಹಳ ಆಘಾತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಸ್ತೆ ಸುರಕ್ಷತೆ ಬಗ್ಗೆ ಪೊಲೀಸರ ಜವಾಬ್ದಾರಿ ಜತೆಗೆ ನಾಗರಿಕರ ಹೊಣೆಗಾರಿಕೆ ಇರುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು. ಅತಿ ವೇಗದಿಂದ ಒಂದು ಜೀವ ಹೋದರೆ ಒಂದು ಕುಟುಂಬವೇ ಅನಾಥವಾಗುತ್ತದೆ ಎನ್ನುವುದನ್ನು ನೆನಪಿಡಬೇಕು ಎಂದು ಹೇಳಿದ್ದಾರೆ.
ಅತಿ ವೇಗ, ಅಜಾಗರೂಕತೆಯಿಂದಲೇ ಹೆಚ್ಚು ಅಪಘಾತಗಳು ಸಂಭವಿಸಿವೆ ಎನ್ನುವ ಅಂಶ ಆಘಾತಕಾರಿ. ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಹಾಗೂ ರಸ್ತೆ ಸುರಕ್ಷತೆ ನಿಮಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪೊಲೀಸ್ ವ್ಯವಸ್ಥೆ ಕೂಡ ಈ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು. ದುರಂತಗಳಲ್ಲಿ ಜೀವ ಕಳೆದುಕೊಂಡ ಎಲ್ಲಾ ನತದೃಷ್ಟರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಕುಟುಂಬಗಳಿಗೆ ಭಗವಂತ ಕರುಣಿಸಲಿ ಎಂದು ಸಂತಾಪ ಸೂಚಿಸಿದ್ದಾರೆ.