ರಾಜ್ಯದ ವಿವಿಧೆಡೆ 329 ಕೋಟಿ ರೂ. ವೆಚ್ಚದಲ್ಲಿ 17 ನೂತನ ಅಗ್ನಿಶಾಮಕ ಠಾಣೆ ನಿರ್ಮಾಣ: ಕೃಷ್ಣ ಬೈರೇಗೌಡ

•        ಅಗತ್ಯವಿರುವ ನಗರಗಳಲ್ಲಿ ನಿರ್ಮಾಣವಾಗಲಿದೆ ಅಗ್ನಿಶಾಮಕ ಠಾಣೆ

•        ಅಗ್ನಿಶಾಮಕ ಠಾಣೆಗಳ ಆಧುನೀಕರಣ-ಉಪಕರಣಗಳ ಖರೀದಿಗೆ ಒತ್ತು

•        ಫೆಬ್ರವರಿ ಅಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲು ಸೂಚನೆ

•        ಅಗತ್ಯವಿದ್ದ ಕಡೆಗಳಲ್ಲಿ ಹೊಸ ವಾಹನಗಳ ಖರೀದಿಗೆ ಅನುಮತಿ

ಬೆಂಗಳೂರು : ಬೆಳೆಯುತ್ತಿರುವ ಮತ್ತು ಅಗತ್ಯವಿರುವ ನಗರಗಳಲ್ಲಿ ನೂತನ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸಿ, ಜನರನ್ನು ಅಗ್ನಿ ಅವಘಡಗಳಿಂದ ಪಾರುಮಾಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

 

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಮಾನದಂಡದ ಅನ್ವಯ ರಾಜ್ಯದ ಅಗ್ನಿಶಾಮಕ ದಳಕ್ಕೆ 2022-23 ರ ಸಾಲಿನಲ್ಲಿ 329 ಕೋಟಿ ರೂ. ಹಣ ಮಂಜೂರಾಗಿದೆ. ಈ ಹಣದ ಬಳಕೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಸೋಮವಾರ ವಿಕಾಸಸೌಧದಲ್ಲಿ ಕ್ರಿಯಾ ಯೋಜನೆ ಮಂಡಿಸಿದರು.

ಈ ವೇಳೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ರಾಜ್ಯದ ಅಗ್ನಿಶಾಮಕ ದಳಕ್ಕೆ ಕೇಂದ್ರದಿಂದ ಮಂಜೂರಾಗಿರುವ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಈ ಹಣದಲ್ಲಿ ರಾಜ್ಯದ ವಿವಿಧೆಡೆ 17 ನೂತನ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ, ಈ ಠಾಣೆಗಳ ನಿರ್ಮಾಣ ನಾಮಕಾವಸ್ತೆಯಾಗಿರದೆ ವೇಗವಾಗಿ ಬೆಳೆಯುತ್ತಿರುವ ಮತ್ತು ಅಗತ್ಯವಿರುವ ನಗರಗಳಲ್ಲಿ ನೂತನ ಠಾಣೆಗಳು ನಿರ್ಮಾಣವಾಗಲಿ” ಎಂದು ಕಿವಿಮಾತು ಹೇಳಿದರು.

 

ನಗರದ ಭಾಗಗಳಲ್ಲಿ ಇತ್ತೀಚೆಗೆ ಅಗ್ನಿ ದುರಂತಗಳು ಹೆಚ್ಚುತ್ತಿವೆ. ಪ್ರಾಣಾಪಾಯಗಳ ಸಂಖ್ಯೆಯೂ ಹೆಚ್ಚುತ್ತಿವೆ. ಮುಂದಿನ ಬೇಸಿಗೆಯಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಜನಸಾಮಾನ್ಯರಲ್ಲೂ ಆತಂಕ ಮೂಡಿದೆ. ಹೀಗಾಗಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಅಗ್ನಿ ಶಾಮಕದಳವನ್ನು ಉನ್ನತೀಕರಣಗೊಳಿಸಬೇಕು, ಆಧುನಿಕ ಉಪಕರಣಗಳನ್ನು ಖರೀದಿ ಮಾಡಬೇಕು ಮತ್ತು ಅಗತ್ಯವಿರುವ ಠಾಣೆಗಳಿಗೆ ಹೆಚ್ಚುವರಿಯಾಗಿ ನೂತನ ವಾಹನಗಳನ್ನು ಖರೀದಿಸಬೇಕು. ಈ ಕೆಲಸಗಳನ್ನು ಫೆಬ್ರವರಿ ಅಂತ್ಯದೊಳಗೆ ಮುಗಿಸಬೇಕಿದ್ದು, ಆದಷ್ಟು ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿ ಎಂದು ಸೂಚಿಸಿದರು.

ಪ್ರಕೃತಿ ವಿಕೋಪದಲ್ಲೂ ಬೇಕಿದೆ ಅಗ್ನಿಶಾಮಕ ದಳದ ನೆರವು!

ಇದೇ ಸಂದರ್ಭದಲ್ಲಿ ಮಳೆ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದ ಬಗ್ಗೆಯೂ ಗಮನ ಸೆಳೆದ ಸಚಿವರು, “ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಮಳೆ ಪ್ರವಾಹದ ಘಟನೆಗಳು ಸಂಭವಿಸುತ್ತವೆ. ಮನೆ ಹಾಗೂ ಕೃಷಿ ಭೂಮಿಗಳಿಗೆ ನೀರು ನುಗ್ಗುವುದು, ಜನವಸತಿ ಪ್ರದೇಶಗಳ ಸಂಪರ್ಕ ರಸ್ತೆ ಕಡಿತವಾಗುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುವ ಸಂದರ್ಭ ಎದುರಾಗುತ್ತವೆ. ಆದರೆ, ಇಂತಹ ಅನಾಹುತಗಳ ಸಂದರ್ಭದಲ್ಲಿ ಸಹಾಯಕ್ಕಾಗಿ ಎನ್ ಡಿಆರ್ ಎಫ್ ತುಕಡಿಗೆ ಕಾಯುವ ಮುನ್ನ ಅಗ್ನಿಶಾಮಕ ದಳ ತುರ್ತಾಗಿ ಜನ ರಕ್ಷಣೆಗೆ ಮುಂದಾಗಬೇಕು” ಎಂದು ಅಭಿಪ್ರಾಯಪಟ್ಟರು.

 

“ಪ್ರಕೃತಿ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೂ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಪ್ತಮಿತ್ರ ಯೋಜನೆ ಜಾರಿಗೆ ತರಲಾಗಿದೆ. ಅಗ್ನಿಶಾಮಕ ದಳ ಈವರೆಗೆ ತನ್ನ ಸಿಬ್ಬಂದಿಗಳ ಜೊತೆಗೆ ಸಾವಿರಾರು ಸಾರ್ವಜನಿಕರಿಗೆ, ವಾಲೆಂಟರಿಗಳಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತರಬೇತಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ವಾಲೆಂಟರಿಗಳಿಗೆ ತರಬೇತಿ ನೀಡಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು” ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.

“ಹೊಸ ಉಪಕರಣ ಖರೀದಿಗೆ ಹಣದ ಅಗತ್ಯ ಇದ್ದರೆ ಅದನ್ನು ಪೂರೈಸಲು ಸರ್ಕಾರ ಬದ್ದವಾಗಿದೆ. ಆದರೆ, ಜನರ ಹಣ ಪೋಲಾಗದಂತೆ ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಅಗ್ನಿಶಾಮಕ ದಳ ಪರಿಣಾಮಕಾರಿ ತಂಡ ರಚಿಸಬೇಕು. ರಾಜ್ಯ ಮೀಸಲು ಪಡೆಯನ್ನೂ ಈ ಕೆಲಸಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು” ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ 329 ಕೋಟಿ ರೂ. ಹಣದ ಪೈಕಿ ನೂತನ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ 98.97 ಕೋಟಿ ರೂ, ರಾಜ್ಯ ತರಬೇತಿ ಕೇಂದ್ರದ ಉನ್ನತೀಕರಣಕ್ಕೆ 16.49 ಕೋಟಿ ರೂ, ಆಧುನಿಕ ಉಪಕರಣಗಳ ಖರೀದಿಗೆ 148.45 ಕೋಟಿ ರೂ, ನಗರ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಬಲಪಡಿಸಲು 16.50 ಕೋಟಿ ರೂ ಬಳಸುವ ಕುರಿತು ಕ್ರಿಯಾ ಯೋಜನೆಯಲ್ಲಿ ಮಾಹಿತಿ ನೀಡಲಾಯಿತು.

 

ಸಭೆಯಲ್ಲಿ ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಅಗ್ನಿ ಶಾಮಕದಳ ಪೊಲೀಸ್ ಉಪ ಮಹಾ ನಿರ್ದೇಶಕರಾದ ರವಿ ಡಿ. ಚೆನ್ನಣ್ಣವರ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top