2587 ವಿನೂತನ ವಿನ್ಯಾಸದ ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ ಬೆಸ್ಕಾಂ ಗುರಿ

ಬೆಂಗಳೂರು: ಪ್ರಸ್ತುತ ಕೈಗೊಂಡಿರುವ ಟ್ರಾನ್ಸ್ ಫಾರ್ಮರ್ ನಿರ್ವಹಣಾ ಅಭಿಯಾನದ ಜತೆಗೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 2587 ವಿನೂತನ ವಿನ್ಯಾಸದ ಟ್ರಾನ್ಸ್ ಫಾರ್ಮರ್ ಅಳವಡಿಸುವ ಕಾರ್ಯುದಲ್ಲಿ ಬೆಸ್ಕಾಂ ತೊಡಗಿದೆ. ಏಪ್ರಿಲ್ 20ರಂದು ಆರಂಭಗೊಂಡ ಎರಡನೇ ಹಂತದಲ್ಲಿ 2585 ಹೊಸ ವಿನ್ಯಾಸದ ಟ್ರಾನ್ಸ್ ಫಾರ್ಮರ್ ಅಳವಡಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ 3196 ವಿನೂತನ ವಿನ್ಯಾಸದ ಟ್ರಾನ್ಸ್ ಫಾರ್ಮರ್ ಗಳನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಅಳವಡಿಸಲಾಗಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪಾದಚಾರಿ ರಸ್ತೆ ಹಾಗು ಚರಂಡಿ ಮೇಲಿರುವ 2 ಅಥವ 4 ಕಂಬಗಳ ಮೇಲಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಹೊಸ ವಿನ್ಯಾಸದ ಟ್ರಾನ್ಸ್ ಫಾರ್ಮರ್ ಸ್ಟ್ರಕ್ಚರ್ ಗಳಿಗೆ ಮೇಲ್ದರ್ಜೆಗೆ ಏರಿಸುವುದು ಹಾಗು ಅದನ್ನು ಒಂದೇ ಕಂಬದಲ್ಲಿ 11 ಮೀಟರ್ ಎತ್ತರದ ಜಾಗದಲ್ಲಿ ಅಳವಡಿಸುವ ಯೋಜನೆ ಇದಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ದುರಸ್ಥಿಯಲ್ಲಿರುವ, ತಾಂತ್ರಿಕ ಸಮಸ್ಯೆ ಹೊಂದಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಈ ಕ್ರಮದಿಂದಾಗಿ ಪಾದಚಾರಿ ರಸ್ತೆಗಳಲ್ಲಿ ಜನರ ಸುಗಮ ಸಂಚಾರಕ್ಕೆ ಸಹಕಾರಿಯಾಗಲಿದೆ ಅಲ್ಲದೆ ಟ್ರಾನ್ಸ್ ಫಾರ್ಮರ್ ಗಳಿಂದ ಸಂಭವಿಸಬಹುದಾದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಬೆಸ್ಕಾಂ ಮತ್ತು ಬಿಬಿಎಂಪಿಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ಜನನಿಭಿಡ ಪ್ರದೇಶಗಳಲ್ಲಿರುವ ಟ್ರಾನ್ಸ್ ಫಾರ್ಮರ್ ಗಳ ಮೇಲ್ದರ್ಜೆಗೆ ಏರಿಸಲು ನಿರ್ಧಾರ ಕೈಗೊಂಡಿತ್ತು. ಒಂದೇ ಕಂಬದಲ್ಲಿ ಎತ್ತರದ ಸ್ಥಳದಲ್ಲಿ ಟ್ರಾನ್ಸ್ ಫಾರ್ಮರ್ ಗಳನ್ನು ಕೂರಿಸುವುದರಿಂದ ಸ್ಥಳದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ನಿಗದಿಪಡಿಸಿದ ಗುರಿಯಲ್ಲಿ ಈಗಾಗಲೇ 213 ಹೊಸ ವಿನ್ಯಾಸದ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲಾಗಿದ್ದು, ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಬೆಸ್ಕಾಂ ತಿಳಿಸಿದೆ. ಟ್ರಾನ್ಸ್ ಫಾರ್ಮರ್ ಅಭಿಯಾನ ಪ್ರಗತಿ: ಮೇ 5 ರಂದು ಆರಂಭಗೊಂಡಿರುವ 15 ದಿನಗಳ ಟ್ರಾನ್ಸ್ ಫಾರ್ಮರ್ ಅಭಿಯಾನದಲ್ಲಿ ಬುಧವಾರದವರೆಗೆ (ಮೇ 11) 4802 ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆ ಮಾಡಲಾಗಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬೆಸ್ಕಾಂ 8 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ಬೆಂಗಳೂರು ನಗರ ಜಿ್ಲ್ಲೆಯೊಂದರಲ್ಲಿ 1719 ಟ್ರಾನ್ಸ್ ಫಾರ್ಮರ್ ಗಳ ನಿರ್ವಹಣೆಯನ್ನು ಬೆಸ್ಕಾಂ ಮುಗಿಸಿದೆ.

Leave a Comment

Your email address will not be published. Required fields are marked *

Translate »
Scroll to Top