ನೀರು ನುಗ್ಗಿರುವ ಮನೆಗಳಿಗೆ 25,000 ರೂ. ಪರಿಹಾರ ನೀಡಲು ತೀರ್ಮಾನ

ಬೆಂಗಳೂರು : ಬೆಂಗಳೂರು ನಗರದಲ್ಲಿ ಭಾರಿ ಮಳೆ ಸುರಿದ ಪರಿಣಾಮ ನೀರು ನುಗ್ಗಿರುವ ಮನೆಗಳಿಗೆ 25000 ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ನೀರು ನುಗ್ಗಿರುವ ತಗ್ಗು ಪ್ರದೇಶದ ಜನರಿಗೆ ಊಟದ ವ್ಯವಸ್ಥೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಳೆಯಿಂದ ಹಾನಿಗೊಳಗಾದ ಹೊಸಕೆರೆಹಳ್ಳಿ ಹಾಗೂ ರಾಜರಾಜೇಶ್ವರಿನಗರದ ಬಡಾವಣೆಗಳಿಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರವಾಹದಿಂದಾಗಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ ೫ ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿ ಎತ್ತರದ ಪ್ರದೇಶದಿಂದ ಮಳೆನೀರು ಹೆಚ್ಚು ಹರಿದುಬಂದಾಗ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ರಾಜಾಕಾಲುವೆಗಳ ಪಕ್ಕದಲ್ಲಿ ಮನೆಗಳು ಕಟ್ಟಿಕೊಂಡಿದ್ದಾರೆ. ಆದ್ದರಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ನೀರು ನುಗ್ಗಿರುವ ಮನೆಗಳಿಗೆ ನೀರು ತೆಗೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ರಾಜಕಾಲುವೆಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಮಿಸಲು ನೀರು ಹೊರಗೆ ಹರಿಯುವಂತೆ ಸಂಪರ್ಕ ಕಲ್ಪಿಸಬೇಕು. ರಾಜಕಾಲುವೆಗಳಲ್ಲಿ ನೀರು ಹರಿದುಹೋಗದೇ ಒಂದೇ ಕಡೆ ನಿಲ್ಲುತ್ತಿರುವ ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ವರ್ಷದಲ್ಲಿ ಸರಾಗ ಮಳೆನೀರಿನ ಹರಿವಿಗಾಗಿ ಎಲ್ಲ ಅಡಚಣೆಗಳನ್ನು ತೆಗೆಯುವ ಕಾಮಗಾರಿಗಳಿಗೆ ಆದೇಶ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ಇರುವ ಬಾಟೆಲ್‍ನೆಕ್‍ಗಳನ್ನು ತೆಗೆಯಲು ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಸೆಕಂಡರಿ ಮತ್ತು ಟರ್ಷಿಯರಿ ಕಾಲುವೆಗಳನ್ನು ನಿರ್ಮಾಣಕ್ಕೆ ಕ್ರಮ:
ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಕೆರೆ ಪ್ರದೇಶಗಳನ್ನು ಒತ್ತುವರಿ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಇಂತಹ ಪ್ರದೇಶಗಳಲ್ಲಿ ಬಿಬಿಎಂಪಿ ವತಿಯಿಂದ ಸೆಕಂಡರಿ ಮತ್ತು ಟರ್ಷಿಯರಿ ಕಾಲುವೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಗಳನ್ನು ಒಂದು ವರ್ಷದೊಳಗೆ ಮಾಡಲಾಗುವುದು ಎಂದರು.

ರಾಜಕಾಲುವೆಯ ಉಳಿದ ಕಾಮಗಾರಿ ಈ ವರ್ಷ ಪೂರ್ಣ:
ರಾಜಕಾಲುವೆ ನಿರ್ಮಾಣ ಕಾರ್ಯ ಅಪೂರ್ಣವಾಗಿ ನಿಂತುಹೋಗಿರುವ ಪ್ರದೇಶಗಳಲ್ಲಿಯೇ ನೀರು ನುಗ್ಗುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿ, ರಾಜಕಾಲುವೆ ಸುಮಾರು 800 ಕಿಮೀ ಉದ್ದವಿದ್ದು, ಕಳೆದ ವರ್ಷ 400 ಕಿ.ಮೀ ಕಾಮಗಾರಿ ಮಾತ್ರ ಆಗಿದ್ದು, ಇನ್ನುಳಿದ ಕಾಮಗಾರಿಗಳನ್ನು ಈ ವರ್ಷ ಕೈಗೊಂಡು ಪೂರ್ಣಗೊಳಿಸಲಾಗುವುದು ಎಂದರು.

ಉಲ್ಲಾಳದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ :
ಉಲ್ಲಾಳದಲ್ಲಿ ಜಲಮಂಡಳಿಯ ಕಾಮಗಾರಿ ನಡೆಯುತ್ತಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು. ರಾಜಕಾಲುವೆ, ಕೆರೆ ಒತ್ತುವರಿ ಪ್ರದೇಶವನ್ನು ಗುರುತಿಸಲಾಗಿದ್ದು,ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಳಚರಂಡಿ, ಗ್ಯಾಸ್ ಲೈನ್, ನೀರು ಸರಬರಾಜು, ಟೆಲಿಕಾಂ ಕೇಬಲ್, ವಿದ್ಯುಚ್ಛಕ್ತಿ ಕೇಬಲಿಂಗ್ , ಹಲವಾರು ಕಾಮಗಾರಿಗಳು ಒಟ್ಟಿಗೆ ಪ್ರಾರಂಭವಾಗಿದೆ. ಆದ್ದರಿಂದ ಟಾಸ್ಕ್ ಫೋರ್ಸ್‍ನ್ನು ರಚಿಸಲಾಗಿದ್ದು, ಈ ಎಲ್ಲ ಕಾಮಗಾರಿಗಳು ಮುಗಿದ ನಂತರ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Comment

Your email address will not be published. Required fields are marked *

Translate »
Scroll to Top