ಬೆಂಗಳೂರು: ಕಳೆದ 15 ತಿಂಗಳುಗಳಲ್ಲಿ ಸಮಿತಿಯು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ 12 ವರದಿಗಳನ್ನು ಸಲ್ಲಿಸಿದೆ. ಜೆಸಿಸಿ ಸಲ್ಲಿಸಿದ್ದ ವರದಿಗಳನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಪರಿಗಣಿಸಿದ ಹಿನ್ನೆಲೆಯಲ್ಲಿ 2014-18 ರ ಅವಧಿಯಲ್ಲಿ ಡಾ.ಶಿವರಾಂ ಕಾರಂತ ಬಡಾವಣೆಗೆಂದು ಅಧಿಸೂಚನೆ ಹೊರಡಿಸಲಾಗಿದ್ದ 17 ಗ್ರಾಮಗಳ 1475 ಕಟ್ಟಡಗಳಿಗೆ ಅನುಮೋದನೆ ನೀಡಿದೆ ಎಂದು ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಅವರು ತಿಳಿಸಿದರು. ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಎಲ್ಲಾ ಅರ್ಜಿದಾರರಿಗೆ ಎಸ್ಎಂಎಸ್ ಸಂದೇಶದ ಮೂಲಕ ತಿಳಿಸಲಾಗಿದೆ. ಈ ಮೇಲಿನ ಎಲ್ಲಾ ಕಟ್ಟಡ ಮಾಲೀಕರಿಗೆ “ಸಕ್ರಮ ಪ್ರಮಾಣಪತ್ರ’’ಗಳನ್ನು (ಆರ್ಸಿ) ಶೀಘ್ರದಲ್ಲಿ ವಿತರಿಸಲು ಸಮಿತಿ ಉದ್ದೇಶಿಸಿದೆ ಎಂದು ಹೇಳಿದರು. ಈ ಸಕ್ರಮ ಪ್ರಮಾಣ ಪತ್ರಗಳನ್ನು ಡಾ.ಎಸ್ಕೆಎಲ್ನ ಕಟ್ಟಡ ಮಾಲೀಕರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸಕ್ರಮ ಪ್ರಮಾಣಪತ್ರಗಳನ್ನು ವಿತರಿಸುವ ಪ್ರಕ್ರಿಯೆ ಸದ್ಯದಲ್ಲಿಯೇ ಆರಂಭವಾಗಲಿದೆ.
ಈವರೆಗೂ ಉದ್ದೇಶಿತ ಬಡಾವಣೆಯ ವ್ಯಾಪ್ತಿಯಲ್ಲಿ ಈಗಾಗಲೇ ಕಟ್ಟಿರುವ ಕಟ್ಟಡಗಳನ್ನು ಸಕ್ರಮಗೊಳಿಸಲು 7161 ಅರ್ಜಿಗಳನ್ನು ಸ್ವೀಕರಿಸಿದೆ. ಬದಲಿ ನಿವೇಶನ ನೀಡುವುದಕ್ಕೆ 2248 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಸಂಬಂಧಿಸಿದ ಸಾರ್ವಜನಿಕರಿಂದ 2022 ರ ಏಪ್ರಿಲ್ 8 ಅರ್ಜಿಗಳ ಸ್ವೀಕರಿಸಲು ಕೊನೆಯ ದಿನವಾಗಿತ್ತು. ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದರು. ಇದರೊಂದಿಗೆ, ಡಾ.ಶಿವರಾಂ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿರುವ 13 ಬಿಡಿಎ ಅನುಮೋದಿತ ಬಡಾವಣೆಗಳು ಮತ್ತು ನಿರ್ಮಾಣ ಹಂತದಲ್ಲಿರುವ 2 ಬಹುಮಹಡಿ ಅಪಾರ್ಟ್ಮೆಂಟ್ ಸಂಕೀರ್ಣಗಳನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಬಿಡಿಎಗೆ ಆದೇಶ ನೀಡಿದೆ. ಇದೇ ವೇಳೆ, ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ 8 ವಿವಿಧ ಸಂಸ್ಥೆಗಳನ್ನು ಸಕ್ರಮ ಮಾಡುವಂತೆ ಜೆ.ಸಿ.ಸಿ. ಶಿಫಾರಸು ಮಾಡಿದೆ:
- ವಿದ್ಯಾ ವಿಕಾಸ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್, ವೀರಸಾಗರ ಗ್ರಾಮ
- ನಿಕಿಸಾ ಡೆಮೆನ್ಷಿಯಾ ಹೋಂ ಅಂಡ್ ಅಲ್ಝೆಮರ್ ಹಾಸ್ಪಿಟಲ್, ಕೆಂಪನಹಳ್ಳಿ
- ಬಾಲಾಜಿ ಎಜುಕೇಶನ್ ಟ್ರಸ್ಟ್, ರಾಮಗೊಂಡನಹಳ್ಳಿ
- ಗಂಗೋತ್ರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್, ಕಾಳತಮ್ಮನಹಳ್ಳಿ
- ಸೇಂಟ್ ಫಿಲೋಮಿನಾ’ಸ್ ಸ್ಕೂಲ್, ಬ್ಯಾಲಕೆರೆ
- ಜಾಮಿಯಾ ಮಸೀದಿ, ಗಾಣಿಗರಹಳ್ಳಿ, ಚಿಕ್ಕಬಾಣಾವರ
- ಡಾ.ಸಂಜಯ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಟಲ್, ವೀರಸಾಗರ
- ದಿವ್ಯಾ ಕಾರುಣ್ಯ ಚಾರಿಟೇಬಲ್ ಟ್ರಸ್ಟ್, ಬ್ಯಾಲಕೆರೆ
ಮಾನ್ಯ ಸರ್ವೋಚ್ಛ ನ್ಯಾಯಾಲಯದ ಪ್ರಕಾರ ಈ ಮೇಲಿನ ಸಂಘ-ಸಂಸ್ಥೆಗಳನ್ನು ಸಕ್ರಮಗೊಳಿಸಲಾಗುತ್ತದೆ. ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ ಕಟ್ಟಡಗಳನ್ನು 2014 ಕ್ಕೆ ಮುನ್ನ’’,
2014 ಮತ್ತು 2018 ರ ನಡುವೆ’’ ಹಾಗೂ “2018 ರ ನಂತರ’’ ನಿರ್ಮಾಣ ಎಂದು ವರ್ಗೀಕರಣ ಮಾಡುವ ಕಾರ್ಯವನ್ನು ಜೆ.ಸಿ.ಸಿ. ಮುಂದುವರಿಸಿದೆ. ಈ ವರ್ಗೀಕರಣದ ಆಧಾರದ ಮೇಲೆ ಸೂಕ್ತ ಆದೇಶಗಳಿಗಾಗಿ ಸಮಿತಿಯು ಮಾನ್ಯ ಸವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಜೆಸಿಸಿ ನೀಡಿದ ವರದಿ ಆಧಾರದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಆವಲಹಳ್ಳಿಯಲ್ಲಿ 25 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದೆ. ಈ ಜಾಗವು ಬಿಎಂಎಸ್ ಎಜುಕೇಶನ್ ಟ್ರಸ್ಟ್ಗೆ ಸೇರಿದ ಜಾಗವಾಗಿದ್ದು, ಇದು ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಭಾಗವಾಗಿದೆ. ಈ ಟ್ರಸ್ಟ್ ಎಲ್ಲಾ ಅಗತ್ಯವಾದ ಅನುಮತಿ ಮತ್ತು ಅನುಮೋದನೆಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪಡೆದುಕೊಂಡಿದೆ ಮತ್ತು ಬಿಡಿಎದಿಂದ 15-12-2001 ರಂದು ಯೋಜನಾ ಅನುಮತಿಯನ್ನು ಪಡೆದುಕೊಂಡು ದಾಖಲೆಗಳನ್ನು ಸಲ್ಲಿಸಿದೆ.
ಇದೇ ವೇಳೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಹಾರೋಹಳ್ಳಿ ಗ್ರಾಮದಲ್ಲಿ ಗಡಿ ಹೊಂದಾಣಿಕೆ ಆಗದ ಕಾರಣ 34 ಗುಂಟೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದೆ. ಬಿಡಿಎಗೆ 393 ಎಕರೆ ಮತ್ತು 31 ಗುಂಟೆ ಸರ್ಕಾರಿ ಜಮೀನನ್ನು ಹಸ್ತಾಂತರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಿತಿಯು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಗಳನ್ನು ನಡೆಸುತ್ತಿದೆ. ಬಡಾವಣೆಗೆಂದು ಗುರುತಿಸಿರುವ ಸರ್ಕಾರಿ ಭೂಮಿಯನ್ನು ಆದಷ್ಟು ಬೇಗ ಬಿಡಿಎಗೆ ಹಸ್ತಾಂತರ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೈಗೊಂಡು ಗಡಿಯನ್ನು ಗುರುತಿಸಬೇಕೆಂದು ಜೆಸಿಸಿ ಬಿಡಿಎ ಉಪ ಆಯುಕ್ತ (ಭೂ ಸ್ವಾಧೀನ)ರಿಗೆ ಸೂಚನೆ ನೀಡಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯವು 31-03-2022 ರಂದು ಒಂದು ಮಹತ್ವದ ತೀರ್ಪು ನೀಡಿದ್ದು, ಡಾ.ಶಿವರಾಂ ಕಾರಂತ ಬಡಾವಣೆಯಲ್ಲಿ 6 ಪ್ರತ್ಯೇಕ ಬ್ಲಾಕ್ಗಳಲ್ಲಿ(ಹಂತಗಳಲ್ಲಿ) ತಲಾ 25 ಎಕರೆಯಂತೆ ಒಟ್ಟು 150 ಎಕರೆ ಭೂಮಿಯನ್ನು ಮೆ: ರಾಜೀವ್ ಗಾಂಧಿ ವಸತಿ ನಿಗಮ ಲಿಮಿಟೆಡ್ಗೆ ಮಂಜೂರು ಮಾಡುವಂತೆ ಬಿಡಿಎ ಆಯುಕ್ತರಿಗೆ ಸೂಚನೆ ನೀಡಿದೆ. ಈ ಜಾಗಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮವು ಆರ್ಥಿಕವಾಗಿ ಹಿಂದುಳಿದವರಿಗೆ ಮನೆಗಳು/ಫ್ಲಾಟ್ಗಳನ್ನು ನಿರ್ಮಿಸಲಿದೆ. ಇಡಬ್ಲುಎಸ್ ಯೋಜನೆಯಡಿ ವಿಶಾಲವಾದ ಜಾಗ ಮತ್ತು ಬಹುಮಹಡಿ ಕಟ್ಟಡಗಳ ಅಪಾರ್ಟ್ಮೆಂಟ್ಗಳನ್ನು ನಿರ್ಮಾಣ ಮಾಡಬೇಕೆಂದು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ. ಮಂಜೂರು ಮಾಡುವ ಭೂಮಿಯನ್ನು ಜೆ.ಸಿ.ಸಿ ಮೇಲ್ವಿಚಾರಣೆ ಮಾಡಬೇಕೆಂದೂ ಮಾನ್ಯ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ ಉದ್ದೇಶಿತ ಡಾ. ಶಿವರಾಮ್ ಕಾರಂತ ಬಡಾವಣೆ (ಡಾ.ಎಸ್ಕೆಎಲ್) ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಪರಿಶೀಲನೆ ನಡೆಸಿ ಅವುಗಳನ್ನು ಸಕ್ರಮಗೊಳಿಸುವ ಸಂಬಂಧ ಅಧ್ಯಯನ ನಡೆಸಿ ಶಿಫಾರಸು ಮಾಡಲು ಮಾನ್ಯ ಸರ್ವೋಚ್ಛ ನ್ಯಾಯಾಲಯವು ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ(ಜೆಸಿಸಿ)ಯನ್ನು ಡಿಸೆಂಬರ್ 2020 ರಲ್ಲಿ ನೇಮಕ ಮಾಡಿದೆ. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಜೈಕರ್ ಜೆರೋಮ್ ಹಾಗೂ ನಿವೃತ್ತ ಐ.ಪಿ.ಎಸ್ ಅಧಿಕಾರಿ ಎಸ್.ಟಿ. ರಮೇಶ್ ಅವರು ಉಪಸ್ಥಿತರಿದ್ದರು.