ಹಣ ಪಡೆದು ನಮ್ಮೊಂದಿಗೆ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದ ನಿರ್ಮಾಪಕ ಎನ್ ಎಂ ಕುಮಾರ್ ವಿರುದ್ಧ ನಟ ಸುದೀಪ್ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ಕೆಲ ದಿನಗಳ ಹಿಂದೆ ನಿರ್ಮಾಪಕ ಎಂ.ಎನ್ ಕುಮಾರ್ ಆರೋಪವೊಂದನ್ನು ಮಾಡಿದ್ದರು. ಫಿಲ್ಮ್ ಚೇಂಬರ್ನಲ್ಲಿ ಎನ್ಎಂ ಕುಮಾರ್ ಮಾಧ್ಯಮಗೋಷ್ಟಿ ನಡೆಸಿ, ನಟ ಸುದೀಪ್ ಅವರು ಚಿತ್ರದಲ್ಲಿ ನಟಿಸುವುದಾಗಿ ಹೇಳಿ ನನ್ನಿಂದ ಏಳು ವರ್ಷಗಳ ಹಿಂದೆ ಹಣ ಪಡೆದುಕೊಂಡು ನಮ್ಮ ಚಿತ್ರಗಳನ್ನು ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದರು.
ಈ ಹಿನ್ನೆಲೆ ನಟ ಸುದೀಪ್ ಅವರು ನಿರ್ಮಾಪಕ ಎಂ.ಎನ್ ಕುಮಾರ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಹೌದು, ಕುಮಾರ್ ಹಾಗೂ ಎಂ ಎನ್ ಸುರೇಶ್ ಅವರಿಗೆ ತಮ್ಮ ವಕೀಲರ ಮೂಲಕ ಬೇಷರತ್ ಕ್ಷಮೆಯಾಚಿಸಲು ಮತ್ತು ಮಾನಹಾನಿಕರ ಹೇಳಿಕೆಗಳು, ಮಾನಸಿಕ ಸಂಕಟಕ್ಕೆ ಕಾರಣವಾದ ಆರೋಪಗಳಿಗಾಗಿ 10 ಕೋಟಿ ರೂ. ಕೋರಿ ಲೀಗಲ್ ನೋಟಿಸ್ ನೀಡಿದ್ದಾರೆ.
ನೋಟಿಸ್ ತಲುಪಿದ ಮುಂದಿನ ಮೂರು ದಿನಗಳಲ್ಲಿ ಬೇಷರತ್ ಕ್ಷಮೆಯಾಚಿಸಬೇಕು. ಈ ಸಂಬಂಧ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ಎಲ್ಲಾ ಅಂಶಗಳನ್ನು ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗುವುದಾಗಿ ಹಿರಿಯ ವಕೀಲ ಸಿ. ವಿ ನಾಗೇಶ್ ಮೂಲಕ ನೋಟೀಸ್ ನೀಡಲಾಗಿದೆ.
ಸುದೀಪ್ ಪ್ರತಿಕ್ರಿಯೆ: ನಿರ್ಮಾಪಕರ ಆರೋಪದ ಬಳಿಕ ಟ್ವೀಟ್ ಮೂಲಕ ಸುದೀಪ್ ”ಒಳ್ಳೆಯತನವು ಕುಶಲತೆ ಮತ್ತು ದುರುಪಯೋಗದ ಸಾಧನವಲ್ಲ. ಆದರೆ ಅದು ನಿಜವಾಗಿದ್ದಾಗ ಪ್ರಕಾಶಮಾನವಾಗಿ ಹೊಳೆಯುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ವಿನಮ್ರರಾಗಿರಿ ಮತ್ತು ಸತ್ಯವಂತರಾಗಿರಿ” ಎಂಬಂರ್ಥ ನೀಡುವ ಮಾತನ್ನು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ನಟ ನಿರ್ಮಾಪಕರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.