ಬೆಂಗಳೂರು,ಫೆ,7 : ರಾಜ್ಯದಲ್ಲಿ ಸುಮಾರು 4.75 ಲಕ್ಷ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಒಟ್ಟು 210 ಕೋಟಿ ರೂಪಾಯಿಗಳಷ್ಟು ‘ವಿದ್ಯಾರ್ಥಿ ವೇತನ’ ನೀಡಲಾಗುತ್ತಿತ್ತು. ಈಗ ವಿದ್ಯಾರ್ಥಿ ವೇತನವನ್ನು 400 ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. ಹಾವೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನ ಯೋಜನೆಯ ಅನುಷ್ಠಾನದಲ್ಲಿ ಹಲವಾರು ಲೋಪದೋಷಗಳಿದ್ದು, ಏಜೆಂಟರ ಹಾವಳಿಯಿತ್ತು. ಹೀಗಾಗಿ ಮುಖ್ಯ ಮಂತ್ರಿಯವರ ಸೂಚನೆಯಂತೆ, ಆನ್ಲೈನ್ ಮೂಲಕ 400 ಕೋಟಿ ರೂಪಾಯಿ ಹಣವನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಅವರ ಅಕೌಂಟ್ಗೆ ಹಾಕುವ ವ್ಯವಸ್ಥೆ ಆರಂಭಿಸಲಾಗಿದೆ. 2017ರಿಂದ 2020ರವರೆಗೆ ಒಟ್ಟು ಕಾರ್ಮಿಕ ಇಲಾಖೆಯಲ್ಲಿ 3 ಲಕ್ಷ 02 ಸಾವಿರ 600 ಅರ್ಜಿಗಳು ಬಾಕಿ ಇದ್ದವು. 2021ರ ನವೆಂಬರ್ 1 ರಿಂದ ಡಿಸೆಂಬರ್ 31ರವರೆಗೆ ರಾಜ್ಯದಾದ್ಯಂತ ‘ಕಾರ್ಮಿಕ ಅದಾಲತ್’ ಕಾರ್ಯಕ್ರಮ ನಡೆಸಿ, 1 ಲಕ್ಷ 91 ಸಾವಿರ 856 ಅರ್ಜಿಗಳನ್ನು ಇತ್ಯರ್ಥಿಪಡಿಸಿ, 91 ಕೋಟಿ ರೂಪಾಯಿಗಳನ್ನು ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇತಿಹಾಸದಲ್ಲಿ ಇಂಥ ದೊಡ್ಡ ಕ್ರಾಂತಿಕಾರಿ ಅದಾಲತ್ ನಡೆದಿಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ 363 ಅಸಂಘಟಿತ ಕಾರ್ಮಿಕರಿಗೆ ‘ಶ್ರಮ ಸಮ್ಮಾನ್’ ಪ್ರಶಸ್ತಿ ಪ್ರದಾನ ಕೋವಿಡ್ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದಿದೆ. ಕೋವಿಡ್ ಕಡಿಮೆಯಾದ ನಂತರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಮಿಕ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಆಯಾಮ ನೀಡಿದ್ದಾರೆ. ‘ಇ–ಶ್ರಮ’ ಎಂಬ ಹೊಸ ಪೋರ್ಟಲ್ ಅನ್ನು ಆರಂಭಿಸಲಾಗಿದ್ದು, 390 ವರ್ಗದ ಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿ 46 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಮೃತಪಟ್ಟರೆ ಅಟಲ್ಜೀ ಯೋಜನೆಯ ಮೂಲಕ 2 ಲಕ್ಷ ರೂಪಾಯಿ ಪರಿಹಾರ ಮತ್ತು ಶಾಶ್ವತ ಅಂಗವೈಕಲ್ಯ ಉಂಟಾದರೆ 1.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದರು.