‘ರಾಬಕೊವಿ’ಗೆ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ್ ಅವಿರೋಧವಾಗಿ ಆಯ್ಕೆ
ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಸತ್ಯನಾರಾಯಣ ಮಾತ್ರವೇ ನಾಮಪತ್ರ ಸಲ್ಲಿಸಿದರು.
ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆದ, ಬಳ್ಳಾರಿ ಉಪವಿಭಾಗಾಧಿಕಾರಿ ಪ್ರಮೋದ್ ಘೋಷಿಸಿದರು. ಕೆಎಂಎಫ್‌ನ ಮಾಜಿ ಅಧ್ಯಕ್ಷ ಭೀಮ ನಾಯ್ಕ ಚುನಾವಣೆಯಿಂದ ದೂರ ಉಳಿದರು. ಒಕ್ಕೂಟದ ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾಳ್ 7 ಮತ್ತು ಭೀಮ ನಾಯ್ಕ 5 ನಿರ್ದೇಶಕರ ಬಲ ಹೊಂದಿದ್ದರು. ಇದರ ಜತೆಗೆ ಸರ್ಕಾರ ಹಿಟ್ನಾಳ್ ಅವರನ್ನು ಒಕ್ಕೂಟಕ್ಕೆ ಎರಡು ದಿನಗಳ ಹಿಂದಷ್ಟೇ ನಾಮನಿರ್ದೇಶನ ಮಾಡಿತ್ತು. ಹೀಗಾಗಿ ಹಿಟ್ನಾಳ್ ಸಂಖ್ಯಾ ಬಲ 8ಕ್ಕೆ ಏರಿತ್ತು.
ಶಾಸಕ ಹಿಟ್ನಾಳ ಆರಂಭಿಕ ಹೆಜ್ಜೆಯಾಗಿ ರಾಬಕೊವಿ ಒಕ್ಕೂಟದ ಅಧ್ಯಕ್ಷರಾಗಿ ಮುಂದೆ ಕೆಎಂಎಫ್ ಗಾದಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಕ್ಕೆ ಬೇಕಾದ ವೇದಿಕೆಯನ್ನು ಸಿದ್ಧಪಡಿಸಿಕೊಳ್ಳುವ ಭಾಗವಾಗಿಯೇ ರಾಜ್ಯದ ವಿವಿಧ ಹಾಲು ಒಕ್ಕೂಟಗಳಲ್ಲಿರುವ ಆಪ್ತರನ್ನು ಕೆಎಂಎಫ್‌ಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.