ಭೀಕರ ರೈಲು ಅಪಘಾತ : 300ಕ್ಕೂ ಹೆಚ್ಚು ಸಾವು

 ಭುವನೇಶ್ವರ್: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿಗೆ ನಡೆದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 300ಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ ಸುಮಾರು 900ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಹಿನ್ನೆಲೆ ಒಡಿಶಾ ಸರ್ಕಾರ ಒಂದು ದಿನ ಶೋಕಾಚರಣೆ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇಂದು (ಜೂ.03) ಯಾವುದೇ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭೇಟಿ ನೀಡಲಿದ್ದಾರೆ.      

ಬಹನಾಗಾ ರೈಲು ನಿಲ್ದಾಣದ ಬಳಿ 3 ರೈಲು ಮಾರ್ಗಗಳಿದ್ದವು, ಕೋಲ್ಕತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಮೇನ್ ಲೈನ್‍ ನಲ್ಲಿ ನಿನ್ನೆ (ಜೂ.02) ಸಂಜೆ 7.30ಕ್ಕೆ ಹೊರಟಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್, (ರೈಲು ಸಂಖ್ಯೆ 12841) ಒಡಿಶಾದ ಬಹನಗಾ ಬಜಾರ್‌ನಲ್ಲಿರುವ ರೈಲು ನಿಲ್ದಾಣದ ಬಳಿ ಹಳಿ ತಪ್ಪಿ ಪಕ್ಕದ ಹಳಿಯಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಮೊದಲು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಕೋರಮಂಡಲ್ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿ ತಪ್ಪಿ ಮೂರನೇ ರೈಲು ಮಾರ್ಗದ ಮೇಲೂ ಬಿದ್ದಿವೆ.

 

ಕೆಲ ಸಮಯದ ಬಳಿಕ ಇದೇ ಮಾರ್ಗವಾಗಿ ಇನ್ನೊಂದು ಹಳಿಯಲ್ಲಿ ವಿರುದ್ಧ ದಿಕ್ಕಿನಿಂದ ಆಗಮಿಸಿದ ಬೆಂಗಳೂರು-ಹೌರಾ ಎಕ್ಸಪ್ರೆಸ್ (ರೈಲು ಸಂಖ್ಯೆ 12864) ಸಹ ಹಳಿತಪ್ಪಿದ್ದ ಕೋರಮಂಡಲ್ನ ಬೋಗಿಗಳಿಗೆ ಡಿಕ್ಕಿ ಹೊಡೆದಿದ್ದು, ನಾಲ್ಕು ಬೋಗಿಗಳು ಹಳಿತಪ್ಪಿವೆ ಎಂದು ರೈಲ್ವೆ ಸಚಿವಾಲಯದ ವಕ್ತಾರ ಅಮಿತಾಭ್ ಶರ್ಮಾ ಹೇಳಿದ್ದಾರೆ. 

ಅಪಘಾತದಲ್ಲಿ ಮೃತಪಟ್ಟವರ ಕುಟುಂದವರಿಗೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದರು. ಅದೇ ರೀತಿ ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಅವರು ತಿಳಿಸಿದ್ದರು

ಇನ್ನೂ ರೈಲು ಬೋಗಿಗಳಲ್ಲಿ ಸಿಲುಕಿಕೊಂಡಿರುವವರ ರಕ್ಷಣೆ ಕಾರ್ಯ ಇಂದು ಕೂಡ ಮುಂದುವರೆದಿದ್ದು, ಘಟನಾ ಸ್ಥಳಕ್ಕೆ 200ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಟ್ವೀಟ್ ಮಾಡಿದ್ದಾರೆ.

 

ಈ ಘಟನೆ ಬಗ್ಗೆ ಸಭೆ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು “ಸಂಕಷ್ಟದಲ್ಲಿದ್ದವರಿಗೆ ಸಾಧ್ಯವಾದ ಎಲ್ಲಾ ನೆರವು” ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. 

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top