ಘೋಷಿಸಿದ ಎಲ್ಲಾ ಯೋಜನೆಗಳು ಜಾರಿ

ವಿರೋಧ ಪಕ್ಷಗಳ ಟೀಕೆಗಳಿಗೆ ಕಿವಿಗೊಡದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಾದ್ಯಂತ ಎಲ್ಲರಿಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್,ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ,ಕುಟುಂಬದ ಯಜಮಾನಿಗೆ ಎರಡು ಸಾವಿರ ರೂಪಾಯಿ ನೀಡುವುದು,ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ತಲಾ ಹತ್ತು ಕೆಜಿ ಅಕ್ಕಿ ಸೇರಿದಂತೆ ಚುನಾವಣೆಗೂ ಮುನ್ನ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಸಿದ್ಧರಾಮಯ್ಯ  ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದ್ದು,ಆ ಮೂಲಕ ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡಿದೆ.

ವಿಧಾನಸೌಧದಲ್ಲಿಂದು ನಡೆದು ವಿಶೇಷ ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ವಿಷಯ ಪ್ರಕಟಿಸಿದರು.

ಶಕ್ತಿ ಯೋಜನೆಯಡಿ ಜುಲೈ 11 ರಿಂದ ಸಾರಿಗೆ ಸಂಸ್ಥೆಯ ಎಸಿ,ನಾನ್ ಎಸಿ ಬಸ್ಸುಗಳನ್ನು ಹೊರತುಪಡಿಸಿದಂತೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ಪ್ರಕಟಿಸಿದರು.

 

ಇದೇ ರೀತಿ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಯೋಜನೆ ಆಗಸ್ಟ್ ತಿಂಗಳಿನಿಂದ ಜಾರಿಯಾಗಲಿದ್ದು,ರಾಜ್ಯದ ಜನ ಈಗ ಬಳಸುತ್ತಿರುವ ವಾರ್ಷಿಕ ಸರಾಸರಿಯನ್ನು ಪರಿಗಣಿಸಿ,ಅದಕ್ಕಿಂತ ಶೇಕಡಾ ಹತ್ತರಷ್ಟು ವಿದ್ಯುತ್ ಬಳಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ.

ಗೃಹ ಲಕ್ಷ್ನಿ ಯೋಜನೆಯಡಿ ರಾಜ್ಯದ ಎಲ್ಲ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಕೊಡುವ ಕಾರ್ಯ ಆಗಸ್ಟ್ ಹದಿನೈದರಿಂದ ಜಾರಿಯಾಗಲಿದೆ ಎಂದು ವಿವರಿಸಿದರು.

ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪ್ರತಿ ಯೂನಿಟ್ ಗೆ ಹತ್ತು ಕೆಜಿ ಅಕ್ಕಿ ನೀಡಲು ತೀರ್ಮಾನಿಸಲಾಗಿದ್ದು,ಜುಲೈ ಒಂದರಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಸಿದ್ಧರಾಮಯ್ಯ ಪ್ರಕಟಿಸಿದರು.

 

ಯುವ ನಿಧಿ ಯೋಜನೆಯಡಿ ಪದವೀಧರರು,ಡಿಪ್ಲೊಮಾ ಪದವೀಧರರಿಗೆ ಎರಡು ವರ್ಷಗಳ ಕಾಲ ನಿರುದ್ಯೋಗ ಭತ್ಯೆ ನೀಡಲು ತೀರ್ಮಾನಿಸಲಾಗಿದ್ದು ತಕ್ಷಣದಿಂದಲೇ ಇದಕ್ಕೆ ಅರ್ಜಿ ಆಹ್ವಾನಿಸಲಾಗುವುದು ಎಂದು ನುಡಿದರು.

ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಯ ವಾರ್ಷಿಕ ವಿದ್ಯುತ್ ಬಳಕೆಯ ಸರಾಸರಿಯನ್ನು ಪರಿಗಣಿಸಿ ಉಚಿತ ವಿದ್ಯುತ್ ನ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದ ಅವರು, ವಾರ್ಷಿಕ ಸರಾಸರಿಗಿಂತ ಶೇಕಡಾ ಹತ್ತರಷ್ಟು ಹೆಚ್ಚು ವಿದ್ಯುತ್ ನ್ನು ಉಚಿತವಾಗಿ ನೀಡಲಾಗುವುದು ಎಂದರು.

ಈಗ ಬಳಕೆ ಮಾಡುತ್ತಿರುವುದಕ್ಕಿಂತ ಶೇಕಡಾ ಹತ್ತರಷ್ಟು ಹೆಚ್ಚು ವಿದ್ಯುತ್ ನ್ನು ಉಚಿತವಾಗಿ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ ಅವರು,ವಾರ್ಷಿಕ ಸರಾಸರಿಯನ್ನು ಪರಿಗಣಿಸಿದಾಗ ಒಂದು ಮನೆಯವರು ಮಾಸಿಕ ಐವತ್ತು ಯೂನಿಟ್ ಬಳಸುತ್ತಿದ್ದರೆ ಅವರಿಗೆ ಐವತ್ತೈದು ಯೂನಿಟ್ ವಿದ್ಯುತ್ ಉಚಿತವಾಗಿ ಲಭ್ಯವಾಗಲಿದೆ ಎಂದರು.

ಜುಲೈ ತಿಂಗಳಿನಿಂದ ಬಳಕೆ ಮಾಡುವ ವಿದ್ಯುತ್ ಉಚಿತವಾಗಲಿದ್ದು,ಜನ ಆಗಸ್ಟ್ ತಿಂಗಳಿನಿಂದ ದುಡ್ಡು ಕಟ್ಟುವಂತಿಲ್ಲ ಎಂದು ವಿವರ ನೀಡಿದ ಅವರು,ಉಚಿತ ವಿದ್ಯುತ್ ಸೌಲಭ್ಯ ಪಡೆಯುವ ಮುನ್ನ ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಕಟ್ಟಬೇಕು ಎಂದು ಸ್ಪಷ್ಟಪಡಿಸಿದರು.

ಜೂನ್ 11 ರಿಂದ ರಾಜ್ಯದ ಎಲ್ಲ ಮಹಿಳೆಯರು ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದ ಅವರು ಎಸಿ ಮತ್ತು ನಾನ್ ಎಸಿ ಬಸ್ಸುಗಳನ್ನು ಹೊರತುಪಡಿಸಿ ಉಳಿದೆಲ್ಲ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದರು.

 

ರಾಜ್ಯದ ಒಳಗೆ ಮಾತ್ರ ಉಚಿತವಾಗಿ ಸಂಚರಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದ ಅವರು,ರಾಜ್ಯದಿಂದ ಹೊರರಾಜ್ಯಗಳಿಗೆ ಹೋಗುವ ಬಸ್ಸಿನಲ್ಲಿ ಈ ಉಚಿತ ಪ್ರಯಾಣ ಸೌಲಭ್ಯ ಸಿಗುವುದಿಲ್ಲ ಎಂದು ನುಡಿದರು.

ಉಚಿತ ಪ್ರಯಾಣದ ವ್ಯಾಪ್ತಿಯಲ್ಲಿರುವ ಬಸ್ಸುಗಳಲ್ಲಿ ಗಂಡಸರಿಗೆ ಶೇಕಡಾ ಐವತ್ತರಷ್ಟು ಆಸನಗಳನ್ನು ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಅವರು ವಿವರಿಸಿದರು.

ಗೃಹ ಲಕ್ಷ್ನಿ ಯೋಜನೆಯಡಿ ಆಗಸ್ಟ್ ಹದಿನೈದರಿಂದ ಎಲ್ಲ ಕುಟುಂಬಗಳ ಯಜಮಾನಿಯರಿಗೆ ತಲಾ ಎರಡು ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದ ಅವರು,ಜೂನ್ 15 ರಿಂದ ಜುಲೈ 15 ರವರೆಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿ,ನಂತರ ಅವುಗಳನ್ನುಪರಿಷ್ಕರಿಸಲು ಸಮಯ ತೆಗೆದುಕೊಳ್ಳಲಾಗುವುದು ಎಂದರು.

ಅರ್ಜಿದಾರರು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಒದಗಿಸಬೇಕು ಎಂದ ಅವರು,ಆಗಸ್ಟ್ ಹದಿನೈದರಿಂದ ಕುಟುಂಬದ ಯಜಮಾನಿಯರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವವರಿಗೆ ತಲಾ ಹತ್ತು ಕೆಜಿ ಆಹಾರಧಾನ್ಯ ನೀಡಲಾಗುವುದು ಎಂದ ಅವರು,ವ್ಯಕ್ತಿಯೊಬ್ಬರಿಗೆ ಹತ್ತು ಕೆಜಿಯಂತೆ ಗರಿಷ್ಟ ಐವತ್ತು ಕೆಜಿ ಆಹಾರ ಧಾನ್ಯ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಸದರಿ ಯೋಜನೆಯನ್ನು ಜೂನ್ ಒಂದರಿಂದಲೇ ಆರಂಭಿಸುವ ಉದ್ದೇಶವಿದ್ದರೂ ಜೂನ್ ತಿಂಗಳ ಪಡಿತರ ಈಗಾಗಲೇ ಹಂಚಿಕೆಯಾಗಿರುವುದರಿಂದ ಆಹಾರಧಾನ್ಯ ಸಂಗ್ರಹವಿಲ್ಲ.ಹೀಗಾಗಿ ಜುಲೈ 1 ರಿಂದ ಈ ಯೋಜನೆ ಜಾರಿಯಾಗಲಿದೆ ಎಂದು ನುಡಿದರು.

ಯುವ ನಿಧಿ ಯೋಜನೆಯಡಿ ಈ ವರ್ಷ ಪದವೀಧರರಾಗುವ ಮತ್ತು ಡಿಪ್ಲೊಮಾ ಪಡೆಯುವ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದ ಅವರು,ಇದಕ್ಕಾಗಿ ಅವರು ಅರ್ಜಿ ಸಲ್ಲಿಸಿದರೆ ಎರಡು ವರ್ಷಗಳ ಕಾಲ ಅವರಿಗೆ ಈ ನಿರುದ್ಯೋಗ ಭತ್ಯೆ ಸಿಗಲಿದೆ ಎಂದರು.

 

ನಮ್ಮದು ನುಡಿದಂತೆ ನಡೆಯುವ ಸರ್ಕಾರ,ಚುನಾವಣೆಗೂ ಮುನ್ನ ನಾವು ಜನರಿಗೆ ಏನು ಭರವಸೆ ನೀಡಿದ್ದೆವೋ?ಅದನ್ನು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.

ಯಾವುದೇ ಧರ್ಮ,ಜಾತಿ,ಭಾಷೆಯ ಮಿತಿ ಇಲ್ಲದೆ ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆಗಳನ್ನು ನಾವು ನೀಡುತ್ತಿದ್ದೇವೆ ಎಂದ ಅವರು,ಈ ದೇಶದಲ್ಲಿ ನುಡಿದಂತೆ ನಡೆಯುವ ಸರ್ಕಾರ ಯಾವುದಾದರೂ ಇದ್ದರೆ ಅದು ನಮ್ಮ ಸರ್ಕಾರ ಎಂದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಏನೇ ಟೀಕೆ ಮಾಡಲಿ,ಆದರೆ ಆ ಎಲ್ಲ ಟೀಕೆಗಳಿಗೆ ನಾವು ಉತ್ತರ ನೀಡಿದ್ದೇವೆ ಎಂದರು.

ಈಗ ಪ್ರಕಟಿಸಿರುವ ಐದು ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಪ್ರಮಾಣದ ಹಣ ಬೇಕು ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.ಇದಕ್ಕೆ ಅಗತ್ಯವಾದ ಸಂಪನ್ಮೂಲವನ್ನು ನಾವು ಕ್ರೋಢೀಕರಿಸುತ್ತೇವೆ.ಯಾವುದೇ ತೊಂದರೆಯಿಲ್ಲದೆ ಜನರಿಗೆ ಈ ಸೌಲಭ್ಯ ತಲುಪಿಸುತ್ತೇವೆ ಎಂದರು.

 

ಸುದ್ದಿಗೋಷ್ಟಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ,ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಲ ಸಚಿವರು,ಅಧಿಕಾರಿಗಳು ಹಾಜರಿದ್ದರು

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top