ರಾಜಧಾನಿಯಲ್ಲಿ ಮಾವು ಮೇಳ ಆಯೋಜನೆ : ಉತ್ತಮ ಜನಸ್ಪಂದನೆ
ಡಾ.ವರ ಪ್ರಸಾದ್ ರಾವ್ ಪಿ ವಿ
“ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು” ಎಂಬ ಮಾತಿನಂತೆ ಹಲಸು ಹಾಗೂ ಮಾವಿನ ಸೀಸನ್ ಶುರುವಾಗಿದ್ದು, ರಸ್ತೆ ಬದಿಯಲ್ಲಿ ಹಲಸು ಹಣ್ಣುಗಳ ಮಾರಾಟ ನಡೆಯುತ್ತಿದೆ. ಆದರೆ ರುಚಿ ರುಚಿಯಾದ ಹಣ್ಣುಗಳಿಗಾಗಿ ಜನ ಮಾರುಕಟ್ಟೆಯಲ್ಲೆಲ್ಲಾ ಹುಡುಕುತ್ತಿದ್ದಾರೆ. ಇನ್ನೂಂದಡೆ ರಾಸಾಯನಿಕ ಮುಕ್ತ, ಉತ್ತಮ ಗುಣಮಟ್ಟದ ಹಣ್ಣುಗಳು ಯಾವುದು ಎನ್ನುವುದು ಜನರಿಗೆ ಗೊತ್ತಾಗುತ್ತಿಲ್ಲ. ಹೀಗಾಗಿ ತೋಟಗಾರಿಕೆ ಇಲಾಖೆಯು ಜಿಲ್ಲಾಡಳಿತ ಮತ್ತು ಹಾಪ್’ಕಾಮ್ಸ್ ಆಶ್ರಯದಲ್ಲಿ ರಾಜ್ಯದ ಹಲವು ಕಡೆಗಳ್ಳಲ್ಲಿ ಮಾವು ಮತ್ತು ಹಲಸು ಮೇಳಗಳನ್ನು ನಿರಂತರವಾಗಿ ಆಯೋಜಿಸಿ, ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಹಲಸು ಮತ್ತು ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ರೈತರಿಗೆ ನ್ಯಾಯಬೆಲೆ ದೊರಕಿಸಿ ಕೊಡುವ ಉದ್ದೇಶದಿಂದ ಹಣ್ಣುಗಳ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಗಳನ್ನು ಆಯೋಜಿಸಲಾಗುತ್ತಿದೆ.
ಮೈಸೂರಿನಲ್ಲಿ ಯಶಸ್ವಿ ಕಂಡ ಮಾವು ಮೇಳ ಇದೀಗಾ ಕೊಪ್ಪಳ, ಚಿಕ್ಕಬಳ್ಳಾಪುರ, ಉಡುಪಿ,ಮಡಿಕೇರಿ ಸೇರಿದಂತೆ ರಾಜಧಾನಿ ಬೆಂಗಳೂರಿನಲ್ಲಿಯೂ ಆಯೋಜಿಸಲಾಗಿದೆ.
ಮೇಳಗಳಲ್ಲಿ ಮಾವು ಮತ್ತು ಹಲಸಿನ ಹಣ್ಣುಗಳ ಘಮ ಘಮ ಸುವಾಸನೆ ಪಸರಿಸುತ್ತಿದೆ. ಒಂದು ಕಡೆ ಬಾಯಲ್ಲಿ ನೀರೂರಿಸುವ ಹಲಸಿನ ಹಣ್ಣುಗಳು, ಮತ್ತೊಂದೆಡೆ ಕೆಂಪು ಕೆಂಪಾದ ಸೆಂಧೂರ, ಮಲಗೋಬಾದಂಥ ವಿವಿಧ ತಳಿಯ ಮಾವಿನ ಹಣ್ಣುಗಳು…ತಾಜಾ ಹಣ್ಣಿಗಾಗಿ ಸ್ಟಾಲ್ಗಳಿಗೆ ಮುಗಿಬೀಳುತ್ತಿರುವ ಗ್ರಾಹಕರು. ಇದು ಮಾವು ಮತ್ತು ಹಲಸು ಮೇಳದಲ್ಲಿ ಕಂಡು ಬಂದ ದೃಶ್ಯಗಳು.
ನಗರದ ಲಾಲ್ ಬಾಗ್ ಮುಖ್ಯರಸ್ತೆಯಲ್ಲಿರುವ ಹಾಪ್ಕಾಮ್ಸ್ ಕೇಂದ್ರ ಮಳಿಗೆಯಲ್ಲಿ ಮೇಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು. ಮೇಳ ಜೂನ್ ೫ರವರೆಗೆ ನಡೆಯಲಿದೆ. ಹಾಪ್ ಕಾಮ್ಸ್ ನಲ್ಲಿ 20 ಕ್ಕೂ ಹೆಚ್ಚು ಬಗೆಯ ಮಾವುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.
ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ. ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕ. 5 ಕೆಜಿಯಿಂದ 50 ಕೆಜಿಗಳವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೂ ಹೌದು. ಹಳ್ಳಿಗಳಲ್ಲಿ ಹೆಚ್ಚು ಹಲಸು ಬೆಳೆಯಲಾಗುತ್ತದೆ. ಅಲ್ಲಿನ ಮಣ್ಣಿನ ಗುಣ ಹಲಸು ಹಣ್ಣುಗಳ ರುಚಿಗೆ ಕಾರಣವಾಗಿದೆ.
ರಾಜ್ಯದ ನಾನಾ ಕಡೆಯಿಂದ ರೈತರು ತಾವು ಬೆಳೆದಿರುವ ಮಾವು ಹಲಸಿನ ಹಣ್ಣನ್ನು ಇಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ಇನ್ನು ರೈತರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿ ಅಂತಾ ಹಣ್ಣಿನ ದರವನ್ನ ತೋಟಾಗಾರಿಕೆ ಇಲಾಖೆಯೇ ನಿಗದಿ ಮಾಡಿರುತ್ತದೆ.
ಅಕಾಲಿಕ ಮಳೆ ಮತ್ತು ಬಿಸಿಗಾಳಿಯಿಂದ ರಾಜ್ಯದಲ್ಲಿ ಮಾವಿನ ಇಳುವರಿ ಕಡಿಮೆಯಾಗಿತ್ತು, ಹಾಗಾಗಿ ಈ ಮಳೆ ಮಾವಿನ ಮೇಳ ನಡೆಯುವುದೇ ಅನುಮಾನ ಎನ್ನಲಾಗುತ್ತಿತ್ತು. ಆದರೆ ಸದ್ಯ ಮೇಳ ಆರಂಭವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೇಡಿಕೆ ಪೂರೈಸುವುದು ಕಷ್ಟವಾಗುತ್ತದೆ ಎಂದು ಹಾಪ್ಕಾಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಉಮಾ ಶಂಕರ್ ಮಿರ್ಜಿ ತಿಳಿಸಿದ್ದಾರೆ.
ಆನ್ಲೈನ್ನಲ್ಲಿಯೂ ಮಾರಾಟ ಲಭ್ಯವಿದೆ. ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಗಾರರು, ವರ್ತಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿಗೆ ಮಾವು ಮಾಗಿಸುವ ಸಂಬಂಧ ತರಬೇತಿ ಕಾರ್ಯಕ್ರಮ ನಡೆಸಲಾಗಿದೆ.ಇಲ್ಲಿ ಮಾರಾಟವಾಗುವ ಹಣ್ಣುಗಳು ರಾಸಾಯನಿಕ ಮುಕ್ತವಾಗಿದ್ದು, ಸಹಜವಾಗಿ ಮಾಗಿಸಿದ ಹಣ್ಣುಗಳ ಮಾರಾಟಕ್ಕೆ ಮಾತ್ರ ಪ್ರವೇಶವಿದೆ. ಈ ಬಗ್ಗೆ ಪರೀಕ್ಷಿಸಿ ಖಾತರಿಪಡಿಸಿಕೊಳ್ಳಲಾಗುವುದು. ವಂಚಿಸಿ ಮಾರಾಟಕ್ಕೆ ಮುಂದಾದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಹಾರ ಸುರಕ್ಷತಾ ಇಲಾಖೆ ಹಣ್ಣುಗಳನ್ನು ಪರೀಕ್ಷಿಸುತ್ತದೆ. ಕೆಲವು ರೈತರು ಮಾವು ಹಣ್ಣಾಗಲು ಕ್ಯಾಲ್ಸಿಯಂ ಕಾರ್ಬೈಡ್ ಬಳಸುತ್ತಿರುವ ಬಗ್ಗೆ ದೂರುಗಳಿವೆ. ಇದು ಗ್ರಾಹಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ರಾಸಾಯನಿಕ ಬಳಸಿ ಮಾಗಿದ ಮಾವಿನ ಹಣ್ಣನ್ನು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರೇ ತಂದು ಮಾರಾಟ ಮಾಡುತ್ತಿರುವುದರಿಂದ ರೈತರೇ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಜನರು ಕೂಡ ಸ್ವಾಭಾವಿಕವಾಗಿ ಹಣ್ಣಾದ ಹಣ್ಣುಗಳನ್ನು ಕೊಂಡು ಅವುಗಳ ಸವಿಯನ್ನು ಸವಿಯುತ್ತಿದ್ದಾರೆ.