ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಕುಂಠಿತ

ಭರಣಿ ಮಳೆ ಬಂದರೆ ಧರಣಿ ಹಸಿರು ಎಂಬುದು ನಾಣ್ಣುಡಿ. ಮಳೆ ಬಂದರೂ ಹಸಿರಾಗಲಿಲ್ಲ ಧರಣಿ

ಕಿರಣ್‌ಕುಮಾರ್

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲುಕಿನಲ್ಲಿ ಮುಂಗಾರು ಪೂರ್ವ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಿತ್ತನೆ ಪ್ರಮಾಣವೂ ಇಳಿಮುಖವಾಗಿದೆ. ಕಳೆದ ವರ್ಷ ಸುರಿದ ಭಾರಿ ಮಳೆಯಂತೆ ಈ ವರ್ಷವೂ ಸಹ ಮಳೆ ಬೀಳಬಹುದೆಂದು ನಿರೀಕ್ಷಿಸಿದ್ದ ರೈತರಿಗೆ ಭಾರಿ ನಿರಾಸೆ ಮೂಡಿಸಿದೆ.

ಮಾರ್ಚ್ ತಿಂಗಳ ಕೊನೆಯ ವಾರದಿಂದ ಮುಂಗಾರು ಪೂರ್ವ ಅವಧಿ ಆರಂಭವಾಗುತ್ತದೆ. ಜೂನ್ 1ರವರೆಗೂ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಬೀಳುವ ಮಳೆಯನ್ನು ಆಧರಿಸಿದ ತಾಲೂಕಿನಲ್ಲಿ ಹೆಸರು, ಅಲಸಂದೆ, ಉದ್ದು, ಹರಳು ಬಿತ್ತನೆ ಮಾಡುತ್ತಾರೆ. ಅಶ್ವಿನಿ ಮಳೆಗೆ ಭೂಮಿ ಹದ ಮಾಡಿಕೊಂಡು ನಂತರದ ಭರಣಿ ಮಳೆಗೆ ವಾಣಿಜ್ಯ ಬೆಳೆ ಬಿತ್ತುತ್ತಾರೆ. ಆದರೆ ಮಾರ್ಚ್‌ನಿಂದ ಮೇ 25 ರವರೆಗೆ ಜಿಲ್ಲೆಯಲ್ಲಿ ಬಿದ್ದ ಮಳೆಯನ್ನು ಲೆಕ್ಕ ಹಾಕಿದರೆ, ವಾಡಿಕೆಗಿಂತಲೂ ಬಹಳ ಕಡಿಮೆ ಮಳೆಯಾಗಿದೆ. ಮಾರ್ಚ್‌ನಲ್ಲಿ 19 ಮಿಮೀ, ಏಪ್ರಿಲ್‌ನಲ್ಲಿ 21.8 ಮಿಮೀ, ಮೇ.ನಲ್ಲಿ  66.4 ಮಿಮೀ ಮಳೆ ಕೊರತೆಯಾಗಿದೆ.

ಮಳೆ ಕೊರತೆಯ ಪರಿಣಾಮ ತಾಲೂಕಿನ ವಾಣಿಜ್ಯ ಬೆಳೆಯಾದ ಹೆಸರು ಈ ಬಾರಿ 3500 ಹೆಕ್ಟೇರ್ ಬಿತ್ತನೆ ಗುರಿ ಯಿತ್ತು. ಇಲ್ಲಿಯವರೆಗೆ ಕೇವಲ 1220 ಹೆಕ್ಟೇರ್ ಮಾತ್ರ ಪ್ರಗತಿಯಾಗಿದೆ. ಉದ್ದು 70 ಹೆಕ್ಟೇರ್ ಗುರಿಯಿದ್ದರೂ, 66 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅಲಸಂದೆ 450 ಹೆಕ್ಟೇರ್ ಗುರಿಯಿದ್ದು 350 ಹೆಕ್ಟೆರ್ ಬಿತ್ತನೆಯಾಗಿದೆ. ತೊಗರಿ 460 ಹೆಕ್ಟೇರ್,  ಹುರುಳಿ 800 ಹೆಕ್ಟೇರ್, ಅವರೆ 300 ಹೆಕ್ಟೇರ್, ಎಳ್ಳು 80 ಹೆಕ್ಟೇರ್, ಹರಳು 200 ಹೆಕ್ಟೇರ್‌ಗಳಷ್ಟು ಇಲಾಖೆ ಗುರಿಯಿಟ್ಟುಕೊಂಡಿದ್ದರೂ ಸಹ ಒಂದೇ ಒಂದು ಕುಂಟೆ ಬಿತ್ತನೆಯಾಗಲಿಲ್ಲ.

ತಾಲೂಕಿನ ವಾಣಿಜ್ಯ ಏಕದಳ ಧಾನ್ಯ ಗಳನ್ನು ಬಿತ್ತನೆ ಗುರಿ ಮುಟ್ಟಲು ವಾಡಿಕೆ ಮಳೆ ಅತ್ಯವಶ್ಯಕ. ಕೇವಲ ಕೊಳವೆಬಾವಿ ನೀರಿನಲ್ಲಿ ಬೆಳೆಯಲಾಗದು. ಆದರೆ ಪೂರ್ವ ಮುಂಗಾರಿನಲ್ಲಿ ಬೆಳೆಯುತ್ತಿದ್ದ ಈ ಎಲ್ಲ ಪ್ರಮುಖ ವಾಣಿಜ್ಯ ಬೆಳೆಗಳ ಬಿತ್ತನೆ ಮಳೆಯಿಲ್ಲದೆ ಪ್ರಮಾಣ ತೀರಾ ಕಡಿಮೆಯಾಗಿದೆ. ಕಳೆದ ವರ್ಷ ಬಿದ್ದ ಮಳೆ ಹಾಗೂ ಕೆರೆ ಕಟ್ಟೆಗಳು ತುಂಬಿ ಹರಿದ ಪರಿಣಾಮ ಲಕ್ಷಾಂತರ ಅಡಿಕೆ ಗಿಡಗಳನ್ನು ಹಾಕಲಾಗಿದೆ. ಈಗ ಮಳೆ ಕೊರತೆ ಯಾಗಿರುವುದರಿಂದ ಇರುವ ಅಡಿಕೆ, ತೆಂಗು ಮುಂತಾದ ಬಹುವಾರ್ಷಿಕ ವಾಣಿಜ್ಯ ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವ ಅನಿವಾರ್ಯತೆಯಿದೆ. 

ಕಳೆದ ಇಪ್ಪತ್ತು ದಿನಗಳಿಂದಲೂ ಬಿಸಿಲಿನ ವಾತಾವರಣ ಇರುವುದರಿಂದ ಮತ್ತೆ ಮಳೆಗಾಗಿ ರೈತರು ಕಾದು ಕುಳಿತಿದ್ದಾರೆ. ಈಗ ಮಳೆ ಬಂದರೂ ಮುಂಗಾರು ಪೂರ್ವ ಬಿತ್ತನೆ ಮಗಿದ ಅಧ್ಯಾಯವಾಗಿದ್ದು ಬಿತ್ತಿದ್ದ ಬೆಳೆಗಳಿಗೆ ಜೀವ ಬರುವ ಸಾಧ್ಯತೆಯಿದೆ. ಅಲ್ಲದೆ ತಾಲೂಕಿನಲ್ಲಿ ಮಳೆಯಾಶ್ರಿತ ಭೂ ಪ್ರದೇಶ ಹೆಚ್ಚಾಗಿರುವುದರಿಂದ ಮಳೆ ಬಾರದೆ ಇದ್ದರೆ ಅಲ್ಪಾವಧಿ ಬೆಳೆಗಳ, ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳ ಉತ್ಪಾದನೆ ಕಡಿಮೆಯಾಗುವ ಸಂಭವವಿದೆ.

ಈಗಾಗಲೇ ಮುಂಗಾರು ಪೂರ್ವ ಬಿತ್ತನೆ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಬಿತ್ತನೆ ಗುರಿ ಮುಟ್ಟಲು ಅಡ್ಡಿಯಾಗಿದೆ. ರೈತರು ಮಳೆಗಾಗಿ ಕಾಯುತ್ತಿದ್ದರೂ ಸಹ ತಾಲೂಕಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಈಗ ಬಿತ್ತಿದ್ದ ರೈತರ ಬೆಳೆ ಉಳಿಸಿಕೊಳ್ಳಲು ಮಳೆ ಬಂದರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

                                                                                                                                                              ಡಿ.ಆರ್.ಹನುಮಂತರಾಜು, ಸಹಾಯಕ ಕೃಷಿ ನಿರ್ದೇಶಕ, ಚಿಕ್ಕನಾಯಕನಹಳ್ಳಿ

Leave a Comment

Your email address will not be published. Required fields are marked *

Translate »
Scroll to Top