ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಇಂದು ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಹಿರಿಯ ನಾಯಕರಾದ ಹೆಚ್.ಸಿ.ಮಹದೇವಪ್ಪ,ಕೆ,ವೆಂಕಟೇಶ್,ಚಲುವರಾಯಸ್ವಾಮಿ,ಪುಟ್ಟರಂಗಶೆಟ್ಟಿ ಸೇರಿದಂತೆ ಇಪ್ಪತ್ನಾಲ್ಕು ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಜಭವನದಲ್ಲಿಂದು 11;45 ಕ್ಕೆ ಆರಂಭವಾದ ಸಮಾರಂಭದಲ್ಲಿ ಇಪ್ಪತ್ನಾಲ್ಕು ಮಂದಿ ನೂತನ ಸಚಿವರಿಗೆ ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಗೌಪ್ಯತಾ ಪ್ರತಿಜ್ಞಾ ವಿಧಿ ಭೋಧಿಸಿದರು.

ಸುಮಾರು ಎಂಭತ್ತೈದು ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಥ್ಯಾವರ್ ಚಂದ್ ಗೆಹ್ಲೋಟ್,ಮುಖ್ಯಮಂತ್ರಿ ಸಿದ್ಧರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಆ ಮೂಲಕ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಂತಾಗಿದ್ದು ಆ ಮೂಲಕ ಹೊಸ ದಾಖಲೆಯೊಂದು ಸೃಷ್ಟಿಯಾಗಿದೆ.

ಇಂದು ಡಾ. ಹೆಚ್.ಸಿ.ಮಹದೇವಪ್ಪ,ಹೆಚ್.ಕೆ.ಪಾಟೀಲ್,ಕೃಷ್ಣ ಭೈರೇಗೌಡ,ಎನ್.ಚಲುವರಾಯಸ್ವಾಮಿ,ಕೆ.ವೆಂಕಟೇಶ್,ಈಶ್ವರ ಖಂಡ್ರೆ,ಕೆ.ಎನ್.ರಾಜಣ್ಣ,ದಿನೇಶ್ ಗುಂಡೂರಾವ್,ಶರಣ ಬಸಪ್ಪ ದರ್ಶನಾಪೂರ್,ಶಿವಾನಂದಪಾಟೀಲ್,ಆರ್.ಬಿ.ತಿಮ್ಮಾಪೂರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು.

ಇದೇ ರೀತಿ ಎಸ್.ಎಸ್.ಮಲ್ಲಿಕಾರ್ಜುನ್,ಶಿವರಾಜ್ ತಂಗಡಗಿ,ಡಾ.ಶರಣಪ್ರಕಾಶ್ ಪಾಟೀಲ್,ಮಂಕಾಳು ವೈದ್ಯ,ಲಕ್ಷ್ಮಿ ಹೆಬ್ಬಾಳ್ಕರ್,ರಹೀಂ ಖಾನ್,ಡಿ.ಸುಧಾಕರ್,ಸಂತೋಷ್ ಎಸ್.ಲಾಡ್,ಎನ್.ಎಸ್,ಭೋಸರಾಜು,ಭೈರತಿ ಸುರೇಶ್,ಮಧುಬಂಗಾರಪ್ಪ,ಡಾ.ಎಂ.ಸಿ.ಸುಧಾಕರ್ ಮತ್ತು ಬಿ.ನಾಗೇಂದ್ರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಈಗಾಗಲೇ ಸೇರ್ಪಡೆಯಾಗಿರುವ ಪ್ರಮುಖರು,ಶಾಸಕರು,ಅಧಿಕಾರಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದು ಸಮಾರಂಭವನ್ನು ವೀಕ್ಷಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ರಾಜ್ಯಪಾಲರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಭಾಧ್ಯಕ್ಷರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಈ ಮುನ್ನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕಾರ್ಯಕ್ರಮ ಪ್ರಾರಂಭಿಲು ಅನುಮತಿ ಪಡೆದು ಸಮಾರಂಭವನ್ನು ನಿರ್ವಹಿಸಿ ನಿರೂಪಿಸಿದರು.

ಸಮಾರಂಭ ಮುಕ್ತಾಯವಾಗುತ್ತಿದಂತೆ ಫೋಟೋ ಸೆಷನ್ ನಡೆಯಿತು.
ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭಾಂಗಣ ತುಂಬಿ ತುಳುಕಾಡುತ್ತಿತ್ತು