ಬಳ್ಳಾರಿಯಲ್ಲಿ 09 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಬಳ್ಳಾರಿ: ಕೇಂದ್ರ ಆಯುಷ್ ಮಂತ್ರಾಲಯ ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಮತ್ತು ಬಳ್ಳಾರಿಯ ಸಮಸ್ತ ಯೋಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ “ವಸುದೈವ ಕುಟುಂಬಕ್ಕಾಗಿ ಯೋಗ ಹಾಗೂ ಪ್ರತಿ ಮನೆ ಅಂಗಳದಲ್ಲಿ ಯೋಗ” ಎಂಬ ಘೋಷವಾಕ್ಯದೊಂದಿಗೆ ನಗರದ ಕಪ್ಪಗಲ್ ರಸ್ತೆಯ ಶೆಟ್ಟರ ಗುರುಶಾಂತಪ್ಪ ಪದವಿಪೂರ್ವ ಕಾಲೇಜು (ಲಾ ಕಾಲೇಜು ಮೈದಾನ) ಆವರಣದಲ್ಲಿ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಗಣ್ಯರಿಂದ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು.
ಹಿರಿಯ ವೈದ್ಯರಾದ ಡಾ.ವಿಜೇಂದ್ರ ಆಚಾರ್ಯ ಅವರು ಮಾತನಾಡಿ, ಅಸಾಂಕ್ರಾಮಿಕ ರೋಗಗಳು ತಡೆಗಟ್ಟುವಲ್ಲಿ ಯೋಗ ಪರಿಣಾಮಕಾರಿಯಾಗಿದ್ದು, ಮಾನಸಿಕ ಮತ್ತು ದೇಹದ ಸಮತೋಲನಕ್ಕೆ ಯೋಗವೇ ಮದ್ದು ಎಂದು ತಿಳಿಸಿದರು.
ಯೋಗ ಕುರಿತು 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಲಾಯಿತು. ಸುಮಾರು 170 ಕ್ಕೂ ಹೆಚ್ಚು ಸದಸ್ಯ ರಾಷ್ಟ್ರಗಳು ಅನುಮೋದಿಸಿ 2014ರ ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ಇದರ ಫಲವಾಗಿಯೇ 2015 ರಿಂದ ಪ್ರತೀ ವರ್ಷ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಸಂಸ್ಥೆಯ ಪ್ರಕಾರ ಯೋಗವು ಒಂದು “ಸಮತೋಲನ” ಮತ್ತು “ಸಾಮರಸ್ಯದ” ಸಂಕೇತವಾಗಿದೆ ಎಂದು ತಿಳಿಸಿದರು.
“ವಸುದೈವ ಕುಟುಂಬಕ್ಕಾಗಿ ಯೋಗ ಹಾಗೂ ಪ್ರತಿ ಮನೆ ಅಂಗಳದಲ್ಲಿ ಯೋಗ” ಎಂಬ ಘೋಷವಾಕ್ಯದಡಿ ಮಹಾನಗರ ಪಾಲಿಕೆಯ ಮೇಯರ್ ಡಿ.ತ್ರಿವೇಣಿ, ಉಪ ಮೇಯರ್ ಜಾನಕಿ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತುಲ್ಲಾ, ವಿ.ವಿ ಸಂಘದ ಅಧ್ಯಕ್ಷರಾದ ರಾಮನಗೌಡ, ಆಯುಷ್ ವೈದ್ಯಾಧಿಕಾರಿಗಳಾದ ಡಾ.ರಾಜೇಶ್ವರಿ, ಕಲ್ಯಾಣಿ, ಸುಜಾತ, ಡಾ.ಉಮೇಶ್, ಎನ್‍ಸಿಸಿ ಸತೀಶ್ ಸೇರಿದಂತೆ ಜಿಲ್ಲೆಯ ಸಮಸ್ತ ಯೋಗ ಸಂಸ್ಥೆಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಯೋಗ ಮಾಡಿದರು.
ಯೋಗಾಭ್ಯಾಸದಲ್ಲಿ ಪತಂಜಲಿ ಯೋಗ ಸಮಿತಿಯ ರಾಜ್ಯ ಸಮಿತಿ ಸದಸ್ಯರು ಮತ್ತು ಜಿಲ್ಲಾ ಸಂಯೋಜಕರಾದ ಇಸ್ವಿ ಪಂಪಾಪತಿ ಅವರು ಧ್ವನಿ ಸುರುಳಿಯ ಮೂಲಕ ವಿವಿಧ ಆಸನಗಳ ಮಹತ್ವ ತಿಳಿಸುತ್ತಾ, ಯೋಗಾಸಕ್ತರಿಗೆ ನಿಯಮಾನುಸಾರ ಯೋಗಾಸನಗಳನ್ನು 45 ನಿಮಿಷಗಳ ಕಾಲ ಯೋಗ ನಡೆಸಿಕೊಟ್ಟರು. ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯೋಗಾಸಕ್ತರಿಗೆ ನೀರಿನ ಬಾಟಲ್, ಟೀ-ಶರ್ಟ್ ಹಾಗೂ ಕ್ಯಾಪ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ವಿವಿಧ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರು ಸಾಮೂಹಿಕ ಯೋಗಾಭ್ಯಾಸದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ಯೋಗಾಭ್ಯಾಸದಲ್ಲಿ ಭಾಗವಹಿಸಿದ ಎಲ್ಲಾ ಯೋಗಾಸಕ್ತರಿಗೆ ಸಸಿಗಳನ್ನು ವಿತರಿಸಲಾಯಿತು.