ರೆಡ್ ಕ್ರಾಸ್ ಭವನದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ

ಬೆಂಗಳೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ನಗರದ ರೇಸ್ ಕೋರ್ಸ್ ರಸ್ತೆಯ ರೆಡ್ ಕ್ರಾಸ್ ಭವನದಲ್ಲಿ ವಿಶ್ವ ರೆಡ್ ಕ್ರಾಸ್ ದಿನದ ಆಚರಣೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಎ. ರಘುರಾಮ್ ಭಟ್, ಮಾಜಿ ಕ್ರಿಕೆಟ್ ಆಟಗಾರರು ಮಾತನಾಡಿ ನಮ್ಮೆಲ್ಲಾ ಕ್ರೀಡಾ ಸಂಘ-ಸಂಸ್ಥೆಗಳ ಮೂಲಕವಾಗಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಹೆಚ್ಚು ಮಾಡುವಲ್ಲಿ ನೆರವು ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಎಸ್. ವಿಜಯ ಭಾಸ್ಕರ್ ವಿಆರ್‌ಸಿ, ಹೆಚ್ಓಎ, ಸೆಲೆಕ್ಷನ್ ಸೆಂಟರ್ ಸೌತ್ ರವರು ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಥೆಯು ನೈಸರ್ಗಿಕ ವಿಕೋಪಗಳು, ಕೋವಿಡ್-19 ಹಾಗೂ ವಿಕೋಪಗಳ ಸಂದರ್ಭದಲ್ಲಿನ ಸೇವಾಕಾರ್ಯಗಳನ್ನು ನೆನೆದು ರೆಡ್ ಕ್ರಾಸ್ ಸ್ವಯಂಸೇವಕರನ್ನು ಅಭಿನಂದಿಸಿದರು. ವಿಶ್ವದಾದ್ಯಂತ ನಡೆಯುತ್ತಿರುವ ರೆಡ್ ಕ್ರಾಸ್ ಕಾರ್ಯಚಟುವಟಿಕೆಗಳನ್ನು ನೆನದು ಸಂತಸ ವ್ಯಕ್ತಪಡಿಸಿದರು. ಗೌರವ ಉಪಸ್ಥಿತಿಯನ್ನು ವಹಿಸಿದ್ಧ ಶ್ರೀ ಗೋಪಾಲ್ ಬಿ ಹೊಸೂರು, ಐಪಿಎಸ್ (ನಿವೃತ್ತ) ಮಾತನಾಡುತ್ತ ರೆಡ್ ಕ್ರಾಸ್ ಕರ್ನಾಟಕ ರಾಜ್ಯ ಶಾಖೆಯು ಮಾನವೀಯ ಸೇವಾ ಕಾರ್ಯಗಳನ್ನು ಹೆಚ್ಚು ಮಾಡುವಲ್ಲಿ ಪ್ರಗತಿಯ ಪಥದತ್ತ ಸಾಗುತ್ತಿದೆ. ಯುವಕರು ಹೆಚ್ಚು ಹೆಚ್ಚು ಸ್ವಯಂಸೇವೆಯಿಂದ ರಕ್ತದಾನ ಮಾಡಲು ಮುಂದಾಗಬೇಕು. ಈ ರಕ್ತದಾನದಿಂದ ನಾವುಗಳೆಲ್ಲರೂ ಜಾತಿ-ಮತ, ಧರ್ಮ ಭೇಧ-ಭಾವಗಳಿಲ್ಲದೇ ನಾವೆಲ್ಲರೂ ಒಂದೇ ಎಂಬ ಸೌಹಾರ್ಧತೆಯನ್ನು ಪಸರಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ರೆಡ್ ಕ್ರಾಸ್ ಸಭಾಪತಿ ವಿಜಯ ಕುಮಾರ್ ಪಾಟೀಲ್ ಶಾವಂತಗೇರಾ ಮಾತನಾಡುತ್ತ ರೆಡ್ ಕ್ರಾಸ್ ರಾಜ್ಯ ಶಾಖೆಯ ಮೂಲಕವಾಗಿ ಬಹಳಷ್ಟು ಅಭಿವೃದ್ಧಿ ಪರವಾದ ಕೆಲಸಕಾರ್ಯಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಕರ್ನಾಟಕದ 5 ಜಿಲ್ಲೆಗಳಲ್ಲಿ ರೆಡ್ ಕ್ರಾಸ್ ರಕ್ತಕೇಂದ್ರಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಉದ್ದೇಶಿಸಲಾಗಿದೆ ಎಂದರು. ಈ ದಿನದ ವಿಶೇಷವಾಗಿ ರೆಡ್ ಕ್ರಾಸ್ ಬೆಂಗಳೂರು ರಕ್ತಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು ಸದರಿ ರಕ್ತದಾನ ಶಿಬಿರದಲ್ಲಿ ಬ್ರಿಗೇಡಿಯರ್ ಎಸ್. ವಿಜಯ ಭಾಸ್ಕರ್ ಒಳಗೊಂಡಂತೆ ಎಂ.ಇ.ಜಿ. ಹಾಗೂ ಎಎಸ್ಸಿ ಯೋಧರು ರಕ್ತದಾನ ಮಾಡಿ ದಿನದ ಮಹತ್ವವನ್ನು ಹೆಚ್ಚು ಮಾಡಿದರು. ಆನಂದ್ ಎಸ್. ಜಿಗಜಿನ್ನಿ ಉಪಸಭಾಪತಿಗಳು ಸ್ವಾಗತಿಸಿದರು, ಹೆಚ್. ಎಸ್. ಬಾಲಸುಬ್ರಮಣ್ಯ ಪ್ರಧಾನ ಕಾರ್ಯದರ್ಶಿಗಳು ದಿನದ ವಿಶೇಷತೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರು, ಮೌಂಟ್ ಕಾರ್ಮಲ್ ಕಾಲೇಜಿನ ಯುವ ರೆಡ್ ಕ್ರಾಸ್ ಸ್ವಯಂಸೇವಕರು ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top