ಬೆಂಗಳೂರು: ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆಯಿಂದ ವಿವಾದಕ್ಕಿಡಾಗಿದ್ದ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಈಗ ನಿಮಗೆ ಎಷ್ಟು ಬೇಕೋ ಅಷ್ಟು ಕೆಲಸ ಮಾಡಿಕೊಳ್ಳಿ.. ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಕೆಲಸದ ಅವಧಿಯ ಬಗ್ಗೆ ಅವರು ಮಾತನಾಡಿದ್ದ ಮಾತುಗಳು ಭಾರೀ ವಿವಾದ ಹಾಗೂ ಟ್ರೋಲ್ಗೂ ಕಾರಣವಾಗಿತ್ತು. ವಾರಕ್ಕೆ ಕನಿಷ್ಠ 70 ಗಂಟೆಯಾದರೂ ಕೆಲಸ ಮಾಡಬೇಕು ಅಂತ ಹೇಳಿದ್ದಕ್ಕೆ ನೆಟಿಜನ್ಸ್ ಕೋಪಗೊಂಡು ಅವರನ್ನು ಟ್ರೋಲ್ ಮಾಡಿದ್ದರು. ಆದರೇ ಇದೀಗ ಯೂಟರ್ನ್ ತೆಗೆದುಕೊಂಡಿರುವ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಕೆಲಸದ ಅವಧಿಯ ಬಗ್ಗೆ ಹೊಸ ಹೇಳಿಕೆ ಕೊಟ್ಟಿದ್ದಾರೆ. ಯಾರಿಗೂ ಕೂಡ ಜಾಸ್ತಿ.. ಜಾಸ್ತಿ ಕೆಲಸ ಮಾಡಿ ಅಂತ ಹೇಳುವುದಕ್ಕೆ ಆಗಲ್ಲ. ಎಷ್ಟು ಸಮಯ ಕೆಲಸ ಮಾಡಬೇಕು ಅನ್ನೋದು ಅವರವರ ವಿವೇಚನೆ ಹಾಗೂ ಆಸಕ್ತಿಗೆ ಬಿಟ್ಟಿದ್ದು ಅಂತ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಅವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ನಾನು ಸಾಯುವವರೆಗೂ ಇದನ್ನೇ ಹೇಳುತ್ತೇನೆ ಎಂದು ಹೇಳಿದ್ದ ಅವರು, ಇದೀಗ ಯೂಟರ್ನ್ ತೆಗೆದುಕೊಂಡಿದ್ದಾರೆ. ನಾನು ಬರೋಬ್ಬರಿ 40 ವರ್ಷ ವಾರದಲ್ಲಿ 70 ಇಲ್ಲ ಅದಕ್ಕಿಂತ ಜಾಸ್ತಿನೇ ಕೆಲಸ ಮಾಡಿದ್ದೇನೆ. ಬೆಳಗ್ಗೆ ಹೋದರೆ ನಾನು ಮನೆಗೆ ಬರ್ತಿದಿದ್ದು ರಾತ್ರಿಗೇ. ಈಗ ಅದೆಲ್ಲ ಚರ್ಚೆ ಮಾಡುವ ವಿಷಯವೇ ಅಲ್ಲ ಎಂದಿದ್ದಾರೆ. ನೀವು ಇದನ್ನು ಮಾಡಬೇಕು, ಅದನ್ನು ಮಾಡಬಾರದು ಅಂತ ಹೇಳುವುದಕ್ಕೆ ಯಾರಿಂದಲೂ ಆಗಲ್ಲ. ಆ ರೀತಿ ಹೇಳುವವರು ಯಾರೂ ಇಲ್ಲ. ಆದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಎಲ್ಲರೂ ಜಾಸ್ತಿ ಕೆಲಸ ಮಾಡಿ ಅಂತ ಹೇಳೋಕೆ ಆಗಲ್ಲ. ಆದರೆ ಆತ್ಮವಿಮರ್ಶೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕಠಿಣ ಪರಿಶ್ರಮ ಯಾಕೆ ಬೇಕು ಅಂತ ಅರ್ಥ ಮಾಡಿಕೊಂಡರೆ ಸಾಕು ಅಂತ ಅವರ ಭಾಷಣದ ಕೊನೆಯಲ್ಲಿ ಸೇರಿಸಿದ್ದಾರೆ. ಒಟ್ಟಾರೆ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಜನ ಸ್ವಾಗತಿಸಿದ್ದಾರೆ.