ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯುವುದು ದುರುದ್ದೇಶಪೂರಿತ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪವು ಗಂಭೀರ ಸ್ವರೂಪದ್ದಾಗಿದೆ. ಈ ಪ್ರಕರಣದ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಜೆಯಲು ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಣಯ ಅಕ್ಷಮ್ಯ. ಇದನ್ನು ಆಮ್ ಆದ್ಮಿ ಪಕ್ಷ ಖಡಾಖಂಡಿತವಾಗಿ ತಿರಸ್ಕರಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಮುಖ್ಯಮಂತ್ರಿ ಚಂದ್ರು ಅವರು, ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿದೆ. ಚಾರ್ಜ್‌ಶೀಟ್‌ ಹಾಕುವ ಹಂತಕ್ಕೆ ಬಂದಿದೆ. ಮುಕ್ತಾಯ ಹಂತದಲ್ಲಿರುವ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆಯುವುದು ದುರುದ್ದೇಶಪೂರಿತವಾಗಿದೆ. ಈ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದರು.

 

ಜನಸಮಾನ್ಯರ, ರೈತರ ಆಸ್ತಿಗಳಲ್ಲಿ ಕೊಂಚವೂ ಹೆಚ್ಚಾಗುವುದಿಲ್ಲ. ಆದರೆ ರಾಜಕಾರಣಿಗಳ ಆಸ್ತಿ ನೂರಾರು ಪಟ್ಟು ಹೆಚ್ಚಾಗುವುದು ಹೇಗೆ? 2013-18ರ ಐದು ವರ್ಷದಲ್ಲಿ ಶಿವಕುಮಾರ್‌ ಅವರ ಆಸ್ತಿ ಶೇ 380ರಷ್ಟು ಏರಿಕೆಯಾಗಿದೆ. ಇದು ಹೇಗೆ ಸಾಧ್ಯವಾಯ್ತು ಎಂಬುದಕ್ಕೆ ಆಧಾರ ಬೇಕಲ್ಲವೇ? ಒಟ್ಟಿನಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ರಕ್ಷಣೆ ಮಾಡಲು ರಾಜ್ಯ ಸರ್ಕಾರ ಈ ಹಾದಿಯನ್ನು ತುಳಿದಿದೆ. ತಪ್ಪು ಮಾಡಿಲ್ಲ ಎಂದಾದರೆ ಸಂಪೂರ್ಣ ತನಿಖೆಯನ್ನು ಎದುರಿಸಿ ದೋಷಮುಕ್ತರಾಗಬೇಕು. ತಮ್ಮ ಆದಾಯ ಮೂಲವನ್ನು ತೋರಿಸಿ ಅಕ್ರಮ ಆಸ್ತಿಯಲ್ಲವೆಂದು ನಿರೂಪಿಸಬೇಕು. ಆದರೆ ತನಿಖೆಯನ್ನೇ ಮಾಡದಂತೆ ನಿರ್ಬಂಧ ಹೇರುತ್ತಾರೆ ಎಂದರೆ ಡಿ.ಕೆ.ಶಿವಕುಮಾರ್‌ ತಪ್ಪಿತಸ್ಥರು ಎಂದಾಗುತ್ತದೆಯಲ್ಲವೇ? ಎಂದು ಚಂದ್ರು ಅವರು ಪ್ರಶ್ನಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸಹ ತಮಗೆ ಬೇಕಾಗಿರುವ ರೀತಿ ಕಾನೂನು ವ್ಯಾಖ್ಯಾನಗಳನ್ನು ನೀಡುವ ಮೂಲಕ ಸಿಬಿಐ ತನಿಖಾ ಸಂಸ್ಥೆಯನ್ನು ದುರ್ಬಳಕೆ  ಮಾಡಿಕೊಳ್ಳುತ್ತಿರುವುದು ನಿನ್ನೆಯ ಸಂಪುಟ ಸಭೆಯ ನಿರ್ಧಾರದಿಂದ ಸ್ಪಷ್ಟವಾಗುತ್ತಿದೆ. ಸರ್ಕಾರಗಳು ಬದಲಾದಂತೆ ತೀರ್ಮಾನ ಬದಲಾವಣೆ ಒಳ್ಳೆಯ ಸಂಪ್ರದಾಯ ಅಲ್ಲ. ಹಿಂದಿನ ಬಿಜೆಪಿ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಮುನ್ನ ಸ್ಪೀಕರ್‌ ಅನುಮತಿ ಪಡೆದಿರಲಿಲ್ಲ ಎಂಬ ಸಬೂಬು ನೀಡುವುದು ತಪ್ಪು. ರಾಜ್ಯ ಸರ್ಕಾರ ಕೂಡಲೇ ಈ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ತನಿಖೆಗೆ ಸಹಕರಿಸಬೇಕು ಎಂದು ಚಂದ್ರು ಅವರು ಒತ್ತಾಯಿಸಿದರು.

ಕೇಂದ್ರ ಸರ್ಕಾರವು ಕೇವಲ ತನ್ನ ರಾಜಕೀಯ ದುರುದ್ದೇಶಗಳಿಗೆ ಮಾತ್ರ ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಈ ರೀತಿಯ ತನಿಖೆಗಳನ್ನು ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಚಟುವಟಿಕೆಗಳಾಗಿವೆ. ವಿರೋಧ ಪಕ್ಷದಲ್ಲಿದ್ದಾಗ ಕಡು ಭ್ರಷ್ಟರು, ತಮ್ಮ ಪಕ್ಷದಲ್ಲಿದ್ದಾಗ ಶುದ್ಧಹಸ್ತರು ಎಂಬ ಧೋರಣೆಯನ್ನು ಅನುಸರಿಸುತ್ತಿದೆ. ಅಜಿತ್ ಪವಾರ್, ಮುಕುಲ್ ರಾಯ್, ಏಕನಾಥ್ ಶಿಂದೆ, ಹಿಮಾಂತ ಬಿಸ್ವಾ ಶರ್ಮಾ, ಸುವೆಂದು ಅಧಿಕಾರಿ, ನಾರಾಯಣ ರಾಣೆ, ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಅನೇಕ ಪ್ರಮುಖ ನಾಯಕರನ್ನು ಹೆದರಿಸಿ ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿತು. ನಂತರ ಅವರ ಮೇಲಿನ ಎಲ್ಲ ಅಕ್ರಮ ಪ್ರಕರಣಗಳ ವಿರುದ್ಧದ ತನಿಖೆಯನ್ನು ಕೈಬಿಟ್ಟಿತು. ಅವರೆಲ್ಲರೂ ಭ್ರಷ್ಟರಾದ ಕಾರಣ ವಿಧಿಯಿಲ್ಲದೆ ಮೂಲ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿಕೊಂಡರು. ಪ್ರಪಂಚವೇ ಮಾತಾಡುವಂತಹ ಮಾದರಿ ಶಿಕ್ಷಣಕ್ರಾಂತಿ ಹಾಗೂ ಆರೋಗ್ಯ ಕ್ರಾಂತಿಗಳನ್ನು ರಾಜಕೀಯ ಆಂದೋಲನಗಳ ಮೂಲಕ ಯಶಸ್ವಿಯಾಗಿ ಮಾಡಿರುವಂತಹ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ಸತ್ಯೇಂದ್ರ ಜೈನ್, ಮನಿಶ್‌ ಸಿಸೋಡಿಯ ಹಾಗೂ ಸಂಜಯ್ ಸಿಂಗ್  ಇಂದು ಸೆರೆಮನೆ ವಾಸದಲ್ಲಿದ್ದಾರೆ. ಅವರು ಬಿಜೆಪಿಯ ಒತ್ತಡ, ಅಧಿಕಾರಗಳ ಅಮಿಷ ಹಾಗೂ ಬೆದರಿಕೆಗಳಿಗೆ ತಲೆಬಾಗಲಿಲ್ಲ. ತನಿಖಾ ಸಂಸ್ಥೆಯು ಇವರಿಂದ ನಯ ಪೈಸೆಯನ್ನು ವಶಪಡಿಸಿಕೊಳ್ಳದಿದ್ದರು, ಆರೋಪವನ್ನು ಸಾಬೀತು ಪಡಿಸದಿದ್ದರೂ, ಪದೇ ಪದೇ ಸರ್ವೋಚ್ಚ ನ್ಯಾಯಾಲಯದ ಛೀಮಾರಿಗೆ  ಒಳಗಾದರೂ ಸಹ ಸುಳ್ಳುಸುಳ್ಳು ಕೇಸ್ ಗಳನ್ನು ಹಾಕಿ ಜೈಲಿಗೆ ಕಳುಹಿಸಿದ್ದಾರೆ. ಮೋದಿ ನಿರಂಕುಶಪ್ರಭುತ್ವದ ಈ ದೇಶದಲ್ಲಿ ಪ್ರಾಮಾಣಿಕ ರಾಜಕಾರಣಕ್ಕೆ ಭಾರಿ ಬೆಲೆ ತೆರೆ ತೆರಬೇಕಾಗುತ್ತದೆ ಎಂದು ಚಂದ್ರು ಅವರು ಬೇಸರ ವ್ಯಕ್ತಪಡಿಸಿದರು.

 

ದೇಶದಲ್ಲಿ ಜನಸಾಮಾನ್ಯರಿಗೂ ಹಾಗೂ ರಾಜಕೀಯ ಪ್ರಭಾವಿ ವ್ಯಕ್ತಿಗಳಿಗೂ ಒಂದೇ ರೀತಿಯ ನ್ಯಾಯದಾನ ವ್ಯವಸ್ಥೆಯು ದೇಶದಲ್ಲಿ ಇರಬೇಕೆಂಬುದು ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳಲ್ಲಿ ಒಂದಾಗಿದೆ ಎಂದು ಚಂದ್ರು ಅವರು ಪ್ರತಿಪಾದಿಸಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top