ನೂತನ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣ ಯಾವಾಗ?

ಮಾತಿಗೆ ಸೀಮಿತರಾದ್ರ ಶಾಸಕ ಜೆ.ಎನ್.ಗಣೇಶ್

ಕೊಟ್ಟ ಭರವಸೆ ಈಡೇರಿಸದ ಶಾಸಕರ ವಿರುದ್ಧ ತಾಲೂಕಿನ ಜನತೆ ಗರಂ

ಕಂಪ್ಲಿ : ಇಲ್ಲಿನ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಶಿಥಿಲಾವಸ್ಥೆಗೆ ತಲುಪಿದೆ. ನೂತನ ಸೇತುವೆ ನಿರ್ಮಿಸಬೇಕೆಂಬ ಸ್ಥಳೀಯರ ಬಹು ವರ್ಷಗಳ ಒತ್ತಾಯಕ್ಕೆ ಮಣಿಯದ ಜನಪ್ರತಿನಿದಿನಗಳು ಹಾಗೂ ಅಧಿಕಾರಿಗಳ ನಡೆಯು ತಾಲೂಕಿನ ಜನತೆಯಲ್ಲಿ ಬೇಸರ ಮೂಡಿಸಿದೆ.

 

1959ರ ಫೆ.17ರಂದು ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಸಚಿವರಾಗಿದ್ದ ಎಚ್. ಎಂ.ಚನ್ನಬಸಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, 1961ರ ಜುಲೈನಲ್ಲಿ ಮೈಸೂರು ಸರ್ಕಾರದ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಕೆ.ವೀರಣ್ಣಗೌಡ ಅವರು ಸೇತುವೆ ಲೋಕಾರ್ಪಣೆ ಮಾಡಿದ್ದರು. 63 ವರ್ಷಗಳಷ್ಟು ಹಳೆಯದಾದ ಈ ಸೇತುವೆ ಪ್ರವಾಹದ ಭೀಕರತೆಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದೆ. ಸೇತುವೆ ಮುಳುಗಡೆ : ಪ್ರತಿ ಬಾರಿಯೂ ತುಂಗಭದ್ರಾ ಜಲಾಶಯದಿಂದ ನದಿಗೆ ಬಹು ಪ್ರಮಾಣದಲ್ಲಿ ನೀರು ಹರಿಬಿಟ್ಟಾಗ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಳ್ಳುವ ಮೂಲಕ ಕಲ್ಯಾಣ ಕರ್ನಾಟಕ ಭಾಗಗಳ ಸಂಪರ್ಕ ಕಡಿತಗೊಳ್ಳುತ್ತದೆ. ಸೇತುವೆ ಮುಳುಗಡೆಗೊಂಡಾಗ ಗಂಗಾವತಿಗೆ ಹಾಗೂ ಗಂಗಾವತಿ ಮಾರ್ಗವಾಗಿ ಸಂಚರಿಸಲು ಪ್ರಯಾಣಿಕರು, ವಿದ್ಯಾರ್ಥಿಗಳು, ಕಾರ್ಮಿಕರು, ನೌಕರರು, ರೋಗಿಗಳು ಸುತ್ತುಬಳಸಿ ಸಂಚರಿಸಬೇಕಾಗಿದೆ. 

ಶಾಸಕ ಗಣೇಶ್ ನೀಡಿದ್ದ ಭರವಸೆ ಹುಸಿ : 2022ರ ಜು. 14 ರಂದು ಅಂದಿನ ಸಚಿವರಾಗಿದ್ದ ಬಿ.ಶ್ರೀರಾಮುಲು ಪ್ರವಾಹದ ಸ್ಥಳಕ್ಕೆ ಭೇಟಿ ನೀಡಿ ನೂತನ ಸೇತುವೆ ನಿರ್ಮಾಣಕ್ಕೆ 69 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರಿಂದ ಸೇತುವೆ ನಿರ್ಮಾಣದ ಭೂಮಿ ಪೂಜೆ ಮಾಡಿಸುವುದಾಗಿ ತಿಳಿಸಿದ್ದರು. ಇದಾದ ಬಳಿಕ ಶಾಸಕ ಜೆ.ಎನ್.ಗಣೇಶ್ ಪತ್ರಿಕಾ ಘೋಷ್ಠಿ ನಡೆಸಿ ಸೇತುವೆ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ ಸುಳ್ಳು ಮಾಹಿತಿ ನೀಡುವ ಮೂಲಕ ಸಚಿವ ರಾಮುಲು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು. ಅಲ್ಲದೇ ಕಂಪ್ಲಿಯ ಜ್ವಲಂತ ಸಮಸ್ಯೆಯಾಗಿದ್ದ ಸೇತುವೆಯ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡು ತಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ನೂತನ ಸೇತುವೆ ನಿರ್ಮಿಸುವುದಾಗಿ ವಿಧಾನಸಭಾ ಚುನಾವಣೆಯ ವೇಳೆ ಭರವಸೆ ನೀಡಿದ್ದರು. ಇದೀಗ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂದಿದ್ದರೂ ಸೇತುವೆ ಅನುದಾನ ತರುವ ವಿಷಯ ಒಂದೆಡೆ ಇರಲಿ ಸೇತುವೆ ವಿಚಾರವನ್ನೇ ಮರೆತಂತೆ ವರ್ತಿಸುತ್ತಿರುವುದು ಶೋಚನಿಯಾವಾಗಿದೆ ಎಂದು ಕೊಟ್ಟ ಭರವಸೆ ಈಡೇರಿಸದ ಶಾಸಕ ಗಣೇಶ್ ವಿರುದ್ಧ ತಾಲೂಕಿನ ಜನತೆ ಆಕ್ರೋಶ ಹೊರ ಹಾಕಿದ್ದಾರೆ.

ಈಗಲಾದರೂ ಶಾಸಕ ಜೆ.ಎನ್.ಗಣೇಶ್ ಹಾಗೂ ಸಂಬಂಧಪಟ್ಟಂತಹ ಸಚಿವರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ನೂತನ ಸೇತುವೆ ನಿರ್ಮಿಸಿ ಕೊಡುವ ಮೂಲಕ ಈ ಭಾಗದ ಜನತೆಗೆ ಅನುಕೂಲತೆ ಕಲ್ಪಿಸಿ ಕೊಡಬೇಕು ಎನ್ನುವುದು ಸ್ಥಳೀಯರ ಹಕ್ಕೊತ್ತಾಯವಾಗಿದೆ.

ನೂತನ ಸೇತುವೆ ಆಗಬೇಕೆಂಬುದು ಬಹು ವರ್ಷಗಳ ಕನಸು

ಶಾಸಕ ಜೆ.ಎನ್.ಗಣೇಶ್ ಚುನಾವಣೆಯ ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಸೇತುವೆ ನಿರ್ಮಾಣಕ್ಕೆ ಅನುದಾನ ತರುವುದಾಗಿ ಆಶ್ವಾಸನೆ ನೀಡಿದ್ದರು ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರೆಡು ವರ್ಷಗಳಾಗುತ್ತಾ ಬಂದಿದ್ದರೂ ಈ ವಿಚಾರ ಕುರಿತು ಶಾಸಕರು ಮೌನ ವಹಿಸಿರುವುದು ಶೋಚನಿಯ. ಕಾರ್ಯಕ್ರಮದ ನೆಪದಲ್ಲಿ ಸದನ ತೊರೆದು ವಿವಿಧಡೆ ತೆರಳುವ ಅವರು ಸೇತುವೆ ಮೇಲೆ ಸಂಚಾರ ಕಡಿತಗೊಂಡು ಹಾಗೂ ಪ್ರವಾಹದಿಂದ ಅನೇಕ ಮನೆಗಳು ಮುಳುಗಿತ್ತಿರುವ ಸಮಯದಲ್ಲೂ ಸ್ಥಳಕ್ಕೆ ಭೇಟಿ ನೀಡದಿರುವುದು ದುರಂತವೇ ಸರಿ. ಈಗಲಾದರೂ ಸರ್ಕಾರ ಎಚ್ಚತ್ತುಕೊಂಡು ಸೇತುವೆ ನಿರ್ಮಾಣಕ್ಕೆ ಮುಂದಾಗಲಿ

·         ರಾಜು ನಾಯಕ, ಜೆಡಿಎಸ್ ಯುವ ಘಟಕದ ರಾಜ್ಯ ಕಾರ್ಯಾಧ್ಯಕ್ಷ

ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ನಿರ್ಮಾಣ ಕುರಿತು ಲೋಕೊಪಯೋಗಿ ಇಲಾಖೆ ಪ್ರಸ್ತಾವನೆ  ಕಳಿಸಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರುವ ಮೂಲಕ ನೂತನ ಸೇತುವೆಗೆ ಅನುದಾನ ಕಲ್ಪಿಸಲು ಪ್ರಯತ್ನಿಸಲಾಗುವುದು

 

·         ಪ್ರಶಾಂತ್ ಕುಮಾರ್ ಮಿಶ್ರಾ , ಜಿಲ್ಲಾಧಿಕಾರಿ ಬಳ್ಳಾರಿ

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top