ಹೆಡ್ಗೇವಾರ್‌ ಅವರ ಬಗ್ಗೆ ಪಾಠ ಸೇರಿಸಿದರೆ ಏನು ಉಪಯೋಗ ಸಿದ್ದರಾಮಯ್ಯ

ಬೆಂಗಳೂರು: ರಾಯಚೂರು ಜಿಲ್ಲೆ ಲಿಂಗಸೂಗೂರು ಹಾಗೂ ದೇವದುರ್ಗಾ ತಾಲೂಕುಗಳಲ್ಲಿ ನಾರಾಯಣಪುರ ಬಲದಂಡೆ ನಾಲೆಯ 1 ರಿಂದ 15 ವಿತರಣಾ ನಾಲೆಗಳ ಆಧುನೀಕರಣ ಮಾಡಲು (ಈ, ಆರ್‌,ಎಮ್) 23/07/2021 ರಲ್ಲಿ 828 ಕೋಟಿ ರೂಪಾಯಿ ಮೊತ್ತದ ಹಾಗೂ 16 ರಿಂದ 18 ಉಪಕಾಲುವೆಗಳ ಅಂದಾಜು ವೆಚ್ಚ 791 ಕೋಟಿ ರೂಪಾಯಿಯ ಒಟ್ಟು 1,619 ಕೋಟಿ ರೂಪಾಯಿ ಟೆಂಡರ್‌ ಕರೆಯಲಾಗಿದೆ. ಈ ಎರಡೂ ಟೆಂಡರ್‌ ಎನ್.ಡಿ ವಡ್ಡರ್ ಅವರ ಹೆಸರಿಗಾಗಿದೆ, ಇವರು ಲಿಂಗಸೂಗೂರಿನ ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರ ಸಹೋದರ. ಕೆಲಸವೇ ಆಗದೆ 425 ಕೋಟಿ ರೂಪಾಯಿ ಬಿಲ್‌ ಪಾವತಿಯಾಗಿದೆ.

ಹಾಲಿ ಶಾಸಕರಾದ ಹುಲಿಗೇರಿ ಅವರು ಮುಖ್ಯಮಂತ್ರಿಗಳಿಗೆ, ಕೇಂದ್ರ ಹಾಗೂ ರಾಜ್ಯದ ನೀರಾವರಿ ಸಚಿವರಿಗೆ, ಜಲ ಸಂಪನ್ಮೂಲ ಇಲಾಖೆಯ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗಳು ಪತ್ರ ಬರೆದ ಮೇಲೆ ಒಂದು ತಾಂತ್ರಿಕ ಸಮಿತಿಯನ್ನು ರಚನೆ ಮಾಡಲಾಗಿದೆ. ಅದರಲ್ಲಿ ರಾಮ್‌ ಪುರೆ, ಶಿವಕುಮಾರ್‌, ಅಶೋಕ್‌ ಹೊಸನಾಡ್‌, ರಾಜೇಂದ್ರ, ಪ್ರದೀಪ್‌ ಮಿತ್ರ ಮಂಜುನಾಥ್‌ ಸೇರಿದಂತೆ 6 ಜನ ಸದಸ್ಯರಿದ್ದಾರೆ. ಈ ಸಮಿತಿ ಸ್ಥಳಕ್ಕೆ ಭೇಟಿನೀಡಿ ಒಂದು ವರದಿ ನೀಡಿದೆ.

ಸಮಿತಿ ನೀಡಿದ ವರದಿಯಲ್ಲಿ ಈ ಮೊದಲೇ ಮಣ್ಣು ತುಂಬಿಸುವ ಕಾರ್ಯ ಮಾಡಿ ಮುಗಿಸಿರುವುದರಿಂದ ಈಗ ಮತ್ತೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಣ್ಣು ತುಂಬಿಸುವ ಅಗತ್ಯ ವೇನಿದೆ?, ಇವರು ಮಣ್ಣು ತುಂಬಲಾಗಿದೆ ಎಂದು ತೋರಿಸುತ್ತಿರುವ ಲೆಕ್ಕ ಸುಳ್ಳು ಎಂದು ಹೇಳಿದೆ. ನಿಯಮದ ಪ್ರಕಾರ ಕೆಂಪು ಮಣ್ಣು ಇರುವ ಕಡೆ ಗ್ರಾವೆಲ್‌ ಹಾಕಬೇಕಾದ ಅಗತ್ಯವಿಲ್ಲ, ಆದರೆ ಇಲ್ಲಿ ಗ್ರಾವೆಲ್‌ ಹಾಕಿದ್ದೇವೆ ಎಂದು ಸುಳ್ಳು ಲೆಕ್ಕ ತೋರಿಸಿದ್ದಾರೆ. ಈ ಯೋಜನೆಯಲ್ಲಿ ಇಂಜಿನಿಯರ್‌ ಗಳು, ಕಂಟ್ರಾಕ್ಟರ್‌ ಗಳು ಹಾಗೂ ಸರ್ಕಾರ ಎಲ್ಲರೂ ಸೇರಿ ಗೋಲ್ಮಾಲ್‌ ಮಾಡಿದ್ದಾರೆ. ಹಿಂದೊಮ್ಮೆ ಆಧುನೀಕರಣಗೊಂಡ ಕಾಲುವೆಗಳಿಗೆ ಮತ್ತೆ ಮರು ನಿರ್ಮಾಣ ಮಾಡುವುದಾಗಿ ಹೇಳಿ ದುಡ್ಡು ಹೊಡೆಯಲಾಗಿದೆ. ಮಣ್ಣು ತುಂಬಿಸಿದ್ದೇವೆ, ಕಲ್ಲು ಬಂಡೆ ಬ್ಲಾಸ್ಟ್‌ ಮಾಡಿದ್ದೇವೆ, ಮುರಮ್‌ ಹಾಕಿದ್ದೇವೆ ಎಂದೆಲ್ಲ ಸುಳ್ಳು ಲೆಕ್ಕ ನೀಡಿ ಬಿಲ್‌ ಪಡೆಯಲಾಗಿದೆ.

ಎಸ್ಟಿಮೇಟ್‌ ಕಮಿಟಿಯ ಅಧ್ಯಕ್ಷ ಬಿಜೆಪಿ ಶಾಸಕ ಅಭಯ್‌ ಪಾಟೀಲ್. ದೊಡ್ಡನಗೌಡ ಪಾಟೀಲ್ ಕೂಡ ಕಮಿಟಿಯ ಒಬ್ಬ ಸದಸ್ಯ. ಈ ಎಸ್ಟಿಮೇಟ್‌ ಕಮಿಟಿಯವರು ಪರಿಶೀಲನೆ ನಡೆಸಲು ಸ್ಥಳಕ್ಕೆ ಹೋದರೆ ಕಂಟ್ರಾಕ್ಟರ್‌ ಪರವಾದ ಗೂಂಡಾಗಳು ಇವರನ್ನು ಒಳಗೆ ಬಿಡಲೇ ಇಲ್ಲ. ಈ ವಿಚಾರ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿಯಾಗಿದೆ. ಕಂಟ್ರಾಕ್ಟರ್‌ ಗೆ ಸರ್ಕಾರದ ಕುಮ್ಮಕ್ಕು ಇಲ್ಲದೆ ಹೀಗೆ ತಡೆದು ಕಳಿಸೋಕೆ ಆಗುತ್ತಾ? ಈ ವರೆಗೆ ಕಂಟ್ರಾಕ್ಟರ್‌ ಅಥವಾ ಅವನ ಹಿಂಬಾಲಕ ಗೂಂಡಾಗಳ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ದೂರು ನೀಡಲು ಹೋದರೆ ಮೇಲಿನಿಂದ ಒತ್ತಡ ಹಾಕಿ ದೂರು ನೀಡದಂತೆ ತಡೆಯಲಾಗಿದೆ. ಸುಮಾರು 800 ಕೋಟಿ ರೂಪಾಯಿಯಷ್ಟು ಹಣವನ್ನು ಮಣ್ಣು ತುಂಬಿಸುವುದಾಗಲೀ, , ಮುರಮ್‌ ಹಾಕುವುದಾಗಲೀ ಮಾಡದೆ ದುಡ್ಡು ನುಂಗಲಾಗಿದೆ.

ನನ್ನ ಪ್ರಕಾರ ಈ ಹಗರಣವನ್ನು ಸದನ ಸಮಿತಿಗೆ ವಹಿಸುವುದು ಉತ್ತಮ, ಸರ್ಕಾರ ಸದನ ಸಮಿತಿಗೆ ಪೊಲೀಸ್‌ ಭದ್ರತೆ ನೀಡಿ, ಸ್ಥಳ ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಇಲ್ಲಿ ಕಂಡುಬರುತ್ತಿರುವ ಎಲ್ಲಾ ಅವ್ಯವಹಾರಗಳು ನಡೆದಿದ್ದೇ ಆದರೆ ಅಷ್ಟೂ ಹಣವನ್ನು ವಸೂಲಿ ಮಾಡಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಸಂಬಂಧಿತ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸುತ್ತೇನೆ. ಇದಕ್ಕೆ ಜಲ ಸಂಪನ್ಮೂಲ ಇಲಾಖೆಯ ಸಚಿವರೇ ನೇರ ಹೊಣೆಯಾಗಿದ್ದು, ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸುತ್ತಾ ಇದ್ದರೆ, ಸರ್ಕಾರ ಮಾನಗೆಟ್ಟು ನಿಂತಿದ್ದರೆ ನಾವು ಎಷ್ಟೇ ನ್ಯಾಯಕ್ಕಾಗಿ ಕೂಗಾಡಿದರೂ ಅದರಿಂದ ಪ್ರಯೋಜನವಾಗಲ್ಲ. ನ್ಯಾಯಾಲಯದಲ್ಲಿ ಹೋರಾಟ ಮಾಡುವ ಅವಕಾಶಗಳ ಬಗ್ಗೆಯೂ ಯೋಚನೆ ಮಾಡುತ್ತೇವೆ.

ಸರ್ಕಾರ ಕಮಿಷನ್‌ ಹಗರಣದ ಬಗ್ಗೆ ಕ್ರಮ ಕೈಗೊಳ್ಳದೆ ಹೋದರೆ ನಾವು ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆ ಕೆಂಪಣ್ಣನವರು ಹೇಳಿದ್ದರು, ಆದರೆ ಈಗ ಕೆಂಪಣ್ಣನವರು ಮುಖ್ಯಮಂತ್ರಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಸುಮ್ಮನಾಗಿದ್ದಾರೆ. ಆದರೆ ಅವರು ಪ್ರಧಾನಿಗಳಿಗೆ ಬರೆದ ಪತ್ರ ಸುಳ್ಳಾಗಲು ಸಾಧ್ಯವಿಲ್ಲ. ನನಗೆ ವರ್ಮಾ ಎನ್ನುವವರು ವಾಚ್‌ ಗಿಫ್ಟ್‌ ಕೊಟ್ಟಿದ್ದರು, ನಾನು ಅದಕ್ಕೆ ಗಿಫ್ಟ್‌ ಟ್ಯಾಕ್ಸ್‌ ಕಟ್ಟಿ ಎ.ಸಿ.ಬಿ ಗೆ ರೆಫರ್‌ ಮಾಡಿದ್ದೆ, ವರ್ಮಾ ಅವರು ದುಬೈನಲ್ಲಿ ಖರೀದಿ ಮಾಡಿದ ಬಿಲ್‌ ಹಾಜರು ಪಡಿಸಿ, ವಾಚ್‌ ನಾನೇ ಕೊಟ್ಟಿದ್ದು ಎಂದು ಅಫಿಡವಿಟ್‌ ಸಲ್ಲಿಸಿದ್ದರು. ಇಷ್ಟೆಲ್ಲಾ ಆದಮೇಲೆ ಆ ವಾಚಿನ ಸಹವಾಸವೇ ಬೇಡ ಎಂದು ಸರ್ಕಾರಕ್ಕೆ ಕೊಟ್ಟಿದ್ದೀನಿ.

ಭಗತ್‌ ಸಿಂಗ್‌ ಅಪ್ಪಟ ದೇಶಭಕ್ತ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಬೇಕು. ಭಗತ್‌ ಸಿಂಗ್‌ ರಂಥವರ ಬಗ್ಗೆ ಓದಿದರೆ ಮಕ್ಕಳಿಗೆ ದೇಶಾಭಿಮಾನ, ಸ್ಪೂರ್ತಿ ಬರುತ್ತದೆ. ಇವರ ಬಗೆಗಿನ ಪಾಠ ತೆಗೆದು ಹೆಡ್ಗೇವಾರ್‌ ಅವರ ಬಗ್ಗೆ ಪಾಠ ಸೇರಿಸಿದರೆ ಏನು ಉಪಯೋಗ? ದೇಶಕ್ಕೆ ಹೆಡ್ಗೇವಾರ್‌ ಕೊಡುಗೆ ಏನು? ಜಾತೀಯತೆ ಪ್ರಚಾರ ಮಾಡಿದ್ದು, ಆರ್‌,ಎಸ್‌,ಎಸ್‌ ಹುಟ್ಟುಹಾಕಿದ್ದು, ಹಿಂದುತ್ವ ಪ್ರಚಾರ ಮಾಡಿದ್ದು ಇವು ಹೆಡ್ಗೇವಾರ್‌ ಮಾಡಿದ್ದು. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರ? ಅವರು ಮಾತನಾಡಿರುವುದು ಬರೀ ದ್ವೇಷ ಭಾವನೆ ಬೆಳೆಸುವಂತವು, ಇವರ ಭಾಷಣ ಕೇಳಿ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ? ದ್ವೇಷವನ್ನು ಅಲ್ಲವೇ? ಪಠ್ಯಕ್ರಮದಿಂದ ಭಗತ್‌ ಸಿಂಗ್‌ ಪಾಠ ಕೈಬಿಟ್ಟಿದ್ದರೆ ಕೂಡಲೇ ಸೇರಿಸಬೇಕು. ಯಾವುದೇ ಕಾರಣಕ್ಕೂ ಹೆಡ್ಗೆವಾರ್‌ ಜೀವನ, ವ್ಯಕ್ತಿತ್ವದ ಪಾಠವನ್ನು ಸೇರಿಸಬಾರದು.

Leave a Comment

Your email address will not be published. Required fields are marked *

Translate »
Scroll to Top