ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ 3ಸಾವಿರ ವಿಶೇಷ ಅನುದಾನ‌ ನೀಡಿಕೆಗೆ ಬದ್ಧ:ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ


ಬಳ್ಳಾರಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈಗ ನೀಡಲಾಗುತ್ತಿರುವ 1500 ಕೋಟಿ ರೂ.ಖರ್ಚನ್ನು ನಿಗದಿಪಡಿಸಿದ ಅವಧಿಯೊಳಗೆ ಸಮರ್ಪಕ ಖರ್ಚು ಮಾಡಿದಲ್ಲಿ 3 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನು ಇದೇ ವರ್ಷದಿಂದ ಒದಗಿಸುವುದಕ್ಕೆ ನಮ್ಮ ಸರಕಾರ ‌ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನಮ್ಮ ಸರಕಾರ ನೀಡುತ್ತಿದೆ ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು. ನಗರದ ಆರ್.ವೈ.ಎಂ.ಇ.ಸಿ ಕಾಲೇಜು ಆವರಣದಲ್ಲಿರುವ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ ,ವಿವಿ ಸಂಘದ‌ ಕಿಂಡರ್ ಗಾರ್ಡನ್ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮತ್ತು ಎಸ್.ಕೆ.ಮೋದಿ ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.


ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಈಗ ನೀಡಲಾಗುತ್ತಿರುವ ವಿಶೇಷ ಅನುದಾನ 1500 ಕೋಟಿ ರೂ.ಗಳನ್ನು ನಿಗದಿಪಡಿಸಿದ ಅವಧಿಯೊಳಗೆ ಇದುವರೆಗೆ ಖರ್ಚು ಮಾಡಲಾಗಿಲ್ಲ;ನಿಗದಿಪಡಿಸಿದ ಅವಧಿಯೊಳಗೆ ಅಂದರೇ ಮಾರ್ಚ್ ಅಂತ್ಯದೊಳಗೆ ಖರ್ಚು ಮಾಡುವುದಕ್ಕೆ ಹಾಗೂ ವಿಶೇಷ ಯೋಜನೆಗಳನ್ನು ರೂಪಿಸುವುದಕ್ಕೆ ಅಗತ್ಯ ಸಹಕಾರವನ್ನು ಸರಕಾರ ನೀಡಲಿದೆ. ಸಮರ್ಪಕವಾಗಿ ಅನುದಾನ ಬಳಕೆ ಮಾಡುವುದರ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ ಎಂದರು ಅಭಿವೃದ್ಧಿ ನಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಮುಖ ಸ್ಥಾನವಿದೆ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಿದೆ ಎಂದು ತಮ್ಮ‌ ಭಾಷಣಗಳಲ್ಲಿ‌ ಪುನರುಚ್ಚರಿಸಿದ ಸಿಎಂ‌ ಬೊಮ್ಮಾಯಿ ಅವರು ಅಭಿವೃದ್ಧಿ ಎಂಬುದು ನಿರಂತರವಾಗಿರಬೇಕು;ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ತಲುಪಲು ಸಾಧ್ಯ ಎಂದರು. ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ;ಸಿಎಂ ಆಗಿರುವುದು ದೈವಿಚ್ಛೆ ಮತ್ತು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ನಮ್ಮ‌ ಹೈಕಮಾಂಡ್ ಕಾರಣ ಎಂದು ಹೇಳಿದ ಸಿಎಂ ಬೊಮ್ಮಾಯಿ ಅವರು ತಾವೆಲ್ಲರೂ ನೀಡಿದ ಜವಾಬ್ದಾರಿ ದೊಡ್ಡದಿದೆ ಎಂಬ ಅರಿವು ನನಗಿದೆ;ತಾವು ನನ್ನ ಮೇಲೆ ಹಾಕಿರುವ ಶಾಲು ತಮ್ಮ ಶ್ರೀರಕ್ಷೆ ಎಂದು ಭಾವಿಸಿರುವೆ;ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನ ಮೇಲಿಟ್ಟುಕೊಂಡಿರುವ ನಿರೀಕ್ಷೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.


ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ,ಬಿ.ಶ್ರೀರಾಮುಲು,ಸಿ.ಸಿ.ಪಾಟೀಲ್,ಸಂಸದರಾದ ವೈ.ದೇವೇಂದ್ರಪ್ಪ,ಕರಡಿ ಸಂಗಣ್ಣ,ಸೈಯದ್ ನಾಸೀರ್ ಹುಸೇನ್, ಶಾಸಕರಾದ‌ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಸೋಮಲಿಂಗಪ್ಪ, ಕೆ.ಸಿ.ಕೊಂಡಯ್ಯ,ಅಲ್ಲಂ ವೀರಭದ್ರಪ್ಪ, ಶಶೀಲ್‌ ನಮೋಶಿ,ಈ.ತುಕಾರಾಂ,ಬುಡಾ ಅಧ್ಯಕ್ಷ ಪಾಲನ್ನ,ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ತಿಪ್ಪಣ್ಣ ಹಾಗೂ ಜನಪ್ರತಿನಿಧಿಗಳು ಹಾಗೂ ವಿವಿ ಸಂಘದ ಪದಾಧಿಕಾರಿಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top