ಬಳ್ಳಾರಿ: ಮುಂಬರುವ ಲೋಕಸಭಾ ಚುನಾವಣೆಗೆ ಇಂದಿನಿಂದಲೇ ಕೌಂಟ್‌ಡೌನ್ ಆರಂಭ, ನಾವು ನೀವೆಲ್ಲ ಸೇರಿ ನಮ್ಮ ಶಕ್ತಿ ಪ್ರದರ್ಶನ ಮಾಡೋಣ, ಬಿಜೆಪಿಯನ್ನು ಮಕಾಡೆ ಮಲಗಿಸುವ ಮೂಲಕ ಬಿಜೆಪಿಯ ನಾಯಕರಿಗೆ ಉತ್ತರ ನೀಡೋಣ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಎದುರು ಮಹಾತ್ಮ ಗಾಂಧಿ ಪುತ್ಥಳಿ ಬಳಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಯ ವರ್ಷಾಚರಣೆ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರವನ್ನು ಲಾಟರಿ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ, ಇಲ್ಲಿನ ಬಿಜೆಪಿ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸೋಣ, ನಮ್ಮ ತಂಟೆಗೆ ಬರಬೇಡಿ, ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ಮಾಡಲು ನಮಗೆ ಬಿಡಿ ಎಂದು ವಾಗ್ದಾಳಿ ನಡೆಸಿದರು.
ಭಾರತ್ ಜೋಡೊ ಯಾತ್ರೆ ನಡೆದು ಒಂದು ವರ್ಷ ಸಂದಿದೆ ಎಂದರೆ ಆಶ್ಚರ್ಯ ಆಗುತ್ತದೆ. ಇಡೀ ಭಾರತದಲ್ಲಿ ಇಷ್ಟು ದೂರ ನಡೆದು ಪಾದಯಾತ್ರೆ ನಡೆಸಿದ ಏಕೈಕ ವ್ಯಕ್ತಿ ರಾಹುಲ್ ಗಾಂಧಿಯವರು ಎಂಬುದು ವಿಶೇಷ ಸಂಗತಿ ಎಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು, ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯನ್ನು ನಡೆಸುವ ಮೂಲಕ ದೇಶದ ಜನರಲ್ಲಿ ವಿಶ್ವಾಸ ಮೂಡಿಸಿದರು. ಇಂದು ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಿದ್ದೇವೆ, 27 ದಿನಗಳ ಕಾಲ ರಾಜ್ಯದಲ್ಲಿ ರಾಹುಲ್ ಗಾಂಧಿಯವರ ಪಾದಯಾತ್ರೆ ಸಂಚರಿಸಿತು, ಅವರು ಹೋದ ಎಲ್ಲ ಕಡೆ ಕಾಂಗ್ರೆಸ್ ಗೆಲುವಾಗಿದೆ ಎಂದರು.
ರಾಹುಲ್ ಗಾಂಧಿಯವರ ಒಂದು ಹೆಜ್ಜೆ ಸಾಕು, ಏನಾದರೂ ಆಗಬಹುದು ಎಂದ ಅವರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ರಾಹುಲ್ ಗಾಂಧಿಯವರು ತೆರೆದಿದ್ದಾರೆ. ಈ ದೇಶಕ್ಕೆ ಅನೇಕ ಬಲಿದಾನ ನೀಡಿದ ಕುಟುಂಬ ರಾಹುಲ್ ಗಾಂಧಿಯವರದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ ಮೂಲಕ ನಮಗೆಲ್ಲ ಶಕ್ತಿ ತುಂಬಿದ್ದಾರೆ ಎಂದರು.
ಕಾಂಗ್ರೆಸ್ಸಿನ ಶಕ್ತಿ ಯುವ ಸಮುದಾಯ, ಮನೆ ಒಂದು ಮೂರು ಬಾಗಿಲು ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ನಾಯಕರ ಬಗ್ಗೆ ವಿರೋಧ ಪಕ್ಷದವರು ಅವಹೇಳನ ಮಾಡುತ್ತಾರೆ, ನಾವು ಒಂದು ದಿನ ಜಗಳ ಮಾಡಿದರೆ, ಮತ್ತೊಂದು ದಿನ ಒಗ್ಗಟ್ಟಾಗಿರುತ್ತೇವೆ, ಒಗ್ಗಟ್ಟಾಗಿ ಜನರ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ತ್ರಿವೇಣಿ, ಪಾಲಿಕೆ ಸದಸ್ಯರಾದ ನೂರ್ ಅಹ್ಮದ್, ರಾಮಾಂಜನೇಯ, ವಿವೇಕ್ ಪೆರಂ, ಕುಬೇರ, ರಾಜೇಶ್ವರಿ ಸುಬ್ಬರಾಯುಡು, ಮುಖಂಡರಾದ ಕಲ್ಲುಕಂಭ ಪಂಪಾಪತಿ, ಮುಂಡ್ರಿಗಿ ನಾಗರಾಜ್, ಹುಮಾಯೂನ್ ಖಾನ್, ಬಿ.ವೆಂಕಟೇಶ್ ಪ್ರಸಾದ್, ಮಂಜುಳಮ್ಮ, ವಿಷ್ಣು ಬೋಯಾಪಾಟಿ, ಅಣ್ಣಾ ನಾಗರಾಜ್, ಗೋವರ್ಧನ್ ರೆಡ್ಡಿ, ಹೊನ್ನೂರಪ್ಪ, ವೆಂಕಟೇಶ್ ಹೆಗಡೆ, ನಾಗಭೂಷಣಗೌಡ, ಎಲ್.ಮಾರಣ್ಣ, ಪಿ.ಜಗನ್, ಮುದಿ ಮಲ್ಲಯ್ಯ, ಮಜರ್, ವಿ.ಎನ್.ಶ್ರೀನಾಥ್, ಜೆರಿ ಜೆರಾಲ್ಡ್, ಇಸಾಖ್, ತೌಸಿಫ್, ಯುವ ಘಟಕದ ಜಿಲ್ಲಾಧ್ಯಕ್ಷ ಚಾಂದ್, ಬೆಣಕಲ್ ಬಸವರಾಜಗೌಡ, ಶೋಭಾ ಕಳಿಂಗ ಮೊದಲಾದವರು ಹಾಜರಿದ್ದರು.