ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಯುವಜನ ಸೇವೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಖಾತೆ ನೀಡಿದ್ದಾರೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಡಿ ಉತ್ತಮ ಕಾರ್ಯ ನಿರ್ವಹಿಸುವ ಗುರಿ ಹೊಂದಿದ್ದೇನೆ ಎಂದು ಸಚಿವ ನಾಗೇಂದ್ರ ಹೇಳಿದರು.
ಅವರು ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮತ್ತು ಅರಣ್ಯ ಪರಿಸರದಲ್ಲಿ ವಾಸ ಮಾಡುವ ಪರಿಶಿಷ್ಟ ಪಂಗಡಗಳ ಜನರಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ ಅವರು, ಯೋಜನೆಗಳು ಪಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಬಡತನ ರೇಖೆಗಳಿಗಿಂತ ಕೆಳಗಿರುವ ಪರಿಶಿಷ್ಟ ಪಂಗಡಗಳ ಕುಟುಂಬಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಅದ್ಯತೆ ನೀಡಲಾಗುವುದು ಎಂದರು.
ನಾನು ಯುವಕನಾಗಿರುವುದರಿಂದ ಉತ್ತಮ ಕಾರ್ಯ ಮಾಡುವ ನಂಬಿಕೆಯಿಂದ ಯುವಜನ ಸೇವಾ ಕ್ರೀಡಾ ಇಲಾಖೆಯನ್ನು ನೀಡಿದ್ದಾರೆ. ಬಳ್ಳಾರಿ ಸೇರಿದಂತೆ ರಾಜ್ಯದ ಬಹುತೇಕ ಕಡೆ ಉತ್ತಮ ಕ್ರೀಡಾಂಗಣ ಹಾಗೂ ಸೌಲಭ್ಯಗಳಿಲ್ಲದೆ ಮಕ್ಕಳು ಕ್ರೀಡೆಯಿಂದ ವಂಚಿತರಾಗಿದ್ದಾರೆ. ಬಳ್ಳಾರಿ ನಗರದಲ್ಲಿ ಸುಸಜ್ಜಿತವಾದ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ರಾಹುಲ್ ಗಾಂಧಿಯವರು ಹೇಳಿದಂತೆ ಜೀನ್ಸ್ ಅಪೇರಲ್ ಪಾರ್ಕ ಮಾಡಲಾಗುವುದು, ಇದರ ಬಗ್ಗೆ ರಾಹುಲ್ ಗಾಂಧಿ ನಿಲುವು ಅಚಲವಾಗಿದ್ದು ಈ ವಿಚಾರವನ್ನ ದೇಶ ವಿದೇಶಗಳಲ್ಲಿ ಬಳ್ಳಾರಿ ಜೀನ್ಸ್ ಬಗ್ಗೆ ಮಾತನಾಡಿದ್ದಾರೆ. ಗ್ಯಾರೆಂಟಿಗಳ ಜಾರಿ ನಂತರ ಜೀನ್ಸ್ ಅಪೇರಲ್ ಪಾರ್ಕ್ ಗಾಗಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು 5000 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ ಎಂದು ಸಚಿವ ನಾಗೇಂದ್ರ ತಿಳಿಸಿದರು.
ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಹೇಳಿದ್ದಾರೆ. ನನ್ನ ಇಲಾಖೆಯಲ್ಲೂ ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವನಾಗಿ ರಾಜ್ಯದ ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಬೀದರ್, ಬೆಳಗಾವಿಯ ಕಟ್ಟ ಕಡೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದರು.