ರಾಜ್ಯದಲ್ಲಿ ಹೆಚ್ಚಿರುವ ವಿದ್ಯುತ್‌ ಬೇಡಿಕೆ ಪೂರೈಸಲು ಕ್ರಮವಹಿಸಿದ್ದೇವೆ: ಕೆ.ಜೆ. ಜಾರ್ಜ್‌

ವಿದ್ಯುತ್, ಕಲ್ಲಿದ್ದಲು ಖರೀದಿಯಲ್ಲಿ ಅವ್ಯವಹಾರದ ಆರೋಪ ತಳ್ಳಿ ಹಾಕಿದ ಇಂಧನ ಸಚಿವರು

ಹೊಸದಿಲ್ಲಿ: ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ. 

ರಾಜ್ಯದಲ್ಲಿ ಹೆಚ್ಚಿರುವ ವಿದ್ಯುತ್‌ ಬೇಡಿಕೆ ಮತ್ತು ಅದರ ಪೂರೈಕೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಲು ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂಧನ ಸಚಿವರು ಮಾತನಾಡಿದರು.

 

“ಈ ಬಾರಿ ವಿದ್ಯುತ್ ಬೇಡಿಕೆ ಎಷ್ಟರ ಮಟ್ಟಿಗೆ ಏರಿಕೆಯಾಗಿದೆ ಎಂದರೆ, ಆಗಸ್ಟ್‌ ತಿಂಗಳ ವಿದ್ಯುತ್ ಬಳಕೆ ಬೇಸಿಗೆ ಕಾಲದಲ್ಲಿನ ಬಳಕೆಯನ್ನು ಮೀರಿಸಿದೆ. ಈ ಅಕ್ಟೋಬರ್‌ನಲ್ಲೇ  15,000 ಮೆ.ವ್ಯಾ.ಗಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್‌ ಒದಗಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿ ಪ್ರಯತ್ನ ಮಾಡಿದ್ದು, ಅದರಂತೆ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನಿಯಮದ ಪ್ರಕಾರ ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ರಾಜ್ಯ ಸರ್ಕಾರ ಇದನ್ನು ತಳ್ಳಿಹಾಕುತ್ತದೆ,” ಎಂದರು.

ವಿದ್ಯುತ್ ಬಳಕೆ ಏರಿಕೆ:

“ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪ್ರತಿ ತಿಂಗಳಿಗೆ 200 ಮಿಲಿಯನ್ ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಆಗುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ  ಅತ್ಯಧಿಕ ಅಂದರೆ 11,268 ಮೆಗಾವ್ಯಾಟ್  ವಿದ್ಯುತ್ ಬೇಡಿಕೆ ಇತ್ತು. 2022ರ ಆಗಸ್ಟ್‌ನಲ್ಲಿ ಗರಿಷ್ಠ ಬಳಕೆ 208 ಮಿಲಿಯನ್ ಯೂನಿಟ್ ನಷ್ಟಿದ್ದರೆ, ಈ ವರ್ಷ ಆಗಸ್ಟ್‌ನ ಗರಿಷ್ಠ ಬಳಕೆ 294 ಮಿಲಿಯನ್ ಯೂನಿಟ್ ಗೆಗೆ ಏರಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲೂ, ನೀರಾವರಿ ಉದ್ದೇಶಗಳಿಗಾಗಿ ರೈತರಿಗೆ 5 ಗಂಟೆಗಳ ನಿರಂತರ ವಿದ್ಯುತ್ ಪೂರೈಸಲು ಇಂಧನ ಸಚಿವಾಲಯವು ಹಗಲು-ರಾತ್ರಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಬೆಳೆ ಮಾದರಿ ಮತ್ತು ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಬ್ಬು ಮತ್ತು ಭತ್ತ ಬೆಳೆಯುವ ಭಾಗಗಳಲ್ಲಿ 7 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಸರಬರಾಜಿನ ಮೇಲ್ವಿಚಾರಣೆಗೆ  ಚೀಫ್‌ ಎಂಜಿನಿಯರ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳು ರಾಜ್ಯದ ಲೋಡ್‌ ಡಿಸ್ಪ್ಯಾಚ್ ಸೆಂಟರ್ (ಎಸ್‌ಎಲ್‌ಡಿಸಿ) ಪರಿಸ್ಥಿತಿ ಮೇಲೂ ನಿಗಾ ಇರಿಸಿದ್ದಾರೆ,” ಎಂದು ಇಂಧನ ಸಚಿವರು ಹೇಳಿದರು.

 

 

“ಈ ವರ್ಷ ಮುಂಗಾರು ಕೈ ಕೊಟ್ಟಿರುವುದರಿಂದ ಗೃಹ ಬಳಕೆ ಮತ್ತು ನೀರಾವರಿ ಪಂಪ್ ಸೆಟ್‌ಗಳಲ್ಲಿ ವಿದ್ಯುತ್ ಬಳಕೆ ಅಂದಾಜು ಶೇ. 45ರಷ್ಟು ಹೆಚ್ಚಳವಾಗಿದೆ. ವಿದ್ಯುತ್ ಬಳಕೆಯ ಹೆಚ್ಚಳದಲ್ಲಿ ನೀರಾವರಿ ಪಂಪ್ ಸೆಟ್‌ಗಳದ್ದು ಸಿಂಹಪಾಲು. ಉಷ್ಣ ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಉತ್ಪಾದನೆಯ ಕೊರತೆ (ಮಳೆ ಕೊರತೆ), ಸೌರ ವಿದ್ಯುತ್ ಮತ್ತು ಪವನ ಶಕ್ತಿ (ಪ್ರತಿಕೂಲ ಹವಾಮಾನ ಪರಿಸ್ಥಿತಿ) ರಾಜ್ಯದ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವು 300 ಮಿಲಿಯನ್ ಯೂನಿಟ್ ನಷ್ಟು ಕುಸಿತ ಕಂಡಿದೆ. ಪ್ರತಿದಿನ, 270-280 ಮಿ.ಯೂ. ವಿದ್ಯುತ್ ಬೇಡಿಕೆಯಿದ್ದರೂ, ನಮ್ಮ ಉತ್ಪಾದನಾ ಸಾಮರ್ಥ್ಯ 230-240 ಮೆ.ಯೂ.ನಷ್ಟಿದೆ. ಹಾಗಾಗಿ ದಿನಕ್ಕೆ 30-40 ಮಿ.ಯೂ. ವಿದ್ಯುತ್‌ ಕೊರತೆ ಎದುರಿಸುತ್ತಿದ್ದೇವೆ. ಆದರೂ ನಮ್ಮ ಸರ್ಕಾರವ  ವಿದ್ಯುತ್‌ ಪೂರೈಕೆಗೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಂಡು ಗೃಹ ಬಳಕೆದಾರರು, ರೈತರು ಮತ್ತು ಕೈಗಾರಿಕೋದ್ಯಮಿಗಳ ಹಿತಾಸಕ್ತಿ ಕಾಯುತ್ತಿದೆ,”ಎಂದರು. 

ವಿದ್ಯುತ್‌ ಪೂರೈಕೆಗೆ ಕ್ರಮಗಳು:

“ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್‌ ಬೇಡಿಕೆ ಕಡಿಮೆ ಇರುವುದರಿಂದ ಈ ಅವಧಿಯಲ್ಲಿ ಕೆಪಿಸಿಎಲ್‌ ಉಷ್ಣ ವಿದ್ಯುತ್‌ ಸ್ಥಾವರದಲ್ಲಿ ವಾರ್ಷಿಕ ನಿರ್ವಹಣೆ ಕಾರ್ಯ ನಡೆಯುತ್ತದೆ. ಹಾಗಾಗಿ ಉತ್ಪಾದನೆ ಕಡಮೆಯಾಗಿತ್ತು.  ಶೀಘ್ರದಲ್ಲೇ ಉಷ್ಣ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಆರಂಭವಾಗಲಿದೆ. ಕೇಂದ್ರ ಗ್ರಿಡ್‌ನಿಂದ ವಿದ್ಯುತ್‌ ಖರೀದಿಸುವ ಜತೆಗೆ ಪಂಜಾಬ್, ಉತ್ತರ ಪ್ರದೇಶದಿಂದಲೂ ಪರಸ್ಪರ ವಿದ್ಯುತ್ ಕೊಟ್ಟು-ತೆಗೆದುಕೊಳ್ಳುವ ವ್ಯವಸ್ಥೆ ಆಗಲಿದೆ ಎಂದು ಮಾಹಿತಿ ನೀಡಿದರು.

 

ಕಲ್ಲಿದ್ದಲ್ಲು ಸಿಗುವ ಸ್ಥಳಗಳಲ್ಲಿ ಮಳೆಯಾಗಿ ಅದರ ಗುಣಮಟ್ಟ ತಗ್ಗಿದೆ. ಇಂಥ ಕಲ್ಲಿದ್ದಲ್ಲನ್ನು ಬಳಸುವುದರಿಂದ ಶಾಖೋತ್ಪನ್ನ ಯಂತ್ರಗಳು ದುರಸ್ತಿಗೆ ಬರುತ್ತಿವೆ. ಹೀಗಾಗದಂತೆ ಎಚ್ಚರವಹಿಸಿ, ಕಲ್ಲಿದ್ದಲು ಆಮದು ಮಾಡಿಕೊಂಡು, ಮಿಶ್ರಣ ಮಾಡಲಾಗುತ್ತದೆ. ರಾಜ್ಯದಲ್ಲಿನ ಶಾಖೋತ್ಪನ್ನ ಸಹ-ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನಗಳಿಂದ ವಿದ್ಯುತ್ ಪಡೆಯಲು “ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ” ವಿದ್ಯುತ್‌ ಕಾಯ್ದೆಯ ಸೆಕ್ಷನ್ 11 ಜಾರಿಗೊಳಸಲಾಗಿದೆ. ಇದರಿಂದ ಖಾಸಗಿ ವಿದ್ಯುತ್ ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್‌ ಖರೀದಿ ಮಾಡಲಾಗುತ್ತದೆ,”ಎಂದು ಸಚಿವರು ತಿಳಿಸಿದರು

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top