ಬೆಂಗಳೂರು : ಬಸವಣ್ಣನವರ ಸಿದ್ಧಾಂತವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ನಾವೆಲ್ಲ ಇಂದು ಬಸವಣ್ಣನವರ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದೇವೆ. ಇಂದು ದೇಶದ ಇತಿಹಾಸದ ಒಂದು ಪವಿತ್ರ ದಿನ. ನಾವು ಎಲ್ಲ ಧರ್ಮಗಳಿಗೂ ಗೌರವ ಕೊಡುತ್ತೇವೆ. ಅವರ ಆಚಾರ-ವಿಚಾರಗಳನ್ನು ಗೌರವಿಸುತ್ತೇವೆ. ರಾಜ್ಯದ ಉನ್ನತ ಅಭಿವೃದ್ಧಿಗೆ, ಸಾಮಾಜಿಕ ಸಾಮರಸ್ಯಕ್ಕೆ ಇದು ದಾರಿದೀಪ. ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಬಸವಣ್ಣನವರ ಮಾರ್ಗದರ್ಶನ, ವಚನಗಳು ಪ್ರತಿಯೊಂದು ಕುಟುಂಬಕ್ಕೆ, ಸಮಾಜಕ್ಕೆ ದಾರಿದೀಪ. ಎಲ್ಲರೂ ಒಟ್ಟಾಗಿ ಸಮರಸ್ಯದಿಂದ ಬದುಕು ನಡೆಸಬೇಕು ಎಂದು ಪ್ರಾರ್ಥಿಸುತ್ತೇನೆ. ಇಂದು ರಂಜಾನ್ ಹಬ್ಬದ ಪವಿತ್ರ ದಿನ. ಸಮಾಜದ ಶಾಂತಿಗಾಗಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ. ಇಂದೇ ಬಸವಣ್ಣನವರ ಜಯಂತಿ ಕೂಡ ಬಂದಿದೆ. ಈ ವೈವಿಧ್ಯತೆಯೇ ನಮ್ಮ ದೇಶದ ದೊಡ್ಡ ಆಸ್ತಿ. ನಾನು ಅವರಿಗೆ ಈದ್ ಮುಬಾರಕ್ ಶುಭಾಶಯಗಳನ್ನು ಸಲ್ಲಿಸಿದ್ದೇನೆ. ನಿಮ್ಮ ಜೊತೆ ನಾವಿದ್ದೇವೆ, ನೀವು ನೋವು ಅನುಭವಿಸುತ್ತಿದ್ದು, ನಮಗೆ ದುಃಖವಾಗುತ್ತಿದೆ. ನಿಮ್ಮ ಭಾವನೆಗಳಿಗೆ, ವ್ಯವಹಾರಕ್ಕೆ ಸಮಸ್ಯೆಗಳಾಗುತ್ತಿವೆ. ಅದನ್ನು ನಿವಾರಿಸುವ, ನಿಮಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಪರಿಹಾರ ಹುಡುಕುತ್ತಿದ್ದೇವೆ. ಭಗವಂತ ನಿಮಗೆ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದೇನೆ.

ಅಕ್ರಮದ ಅಂಗಡಿ ತೆಗೆದದ್ದು ಯಾರು? : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜ್ಯ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಮಿತ್ ಶಾ ಅವರು ಅವರ ಪಕ್ಷದ ವಿಚಾರವಾಗಿ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ. ನೇಮಕಾತಿ ಅಕ್ರಮ ವಿಚಾರ ಕೇವಲ ಮಲ್ಲೇಶ್ವರಂ ಅಥವಾ ಮಾಗಡಿಗೆ ಸೀಮಿತವಾದ ವಿಚಾರವಲ್ಲ. ರಾಜ್ಯದ ಎಲ್ಲಾ ಯುವಕರಿಗೆ ಆಘಾತಕಾರಿ ವಿಚಾರ. ಪಿಎಸ್ಐ, ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ನೇಮಕಾತಿ ಅಕ್ರಮ ನಡೆದಿದೆ. ಉದ್ಯೋಗ ವಿಚಾರದಲ್ಲಿ ಯುವಕರಿಗೆ ನ್ಯಾಯ ಎಲ್ಲಿ ಸಿಗುತ್ತದೆ? ಈ ವಿಚಾರವಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅನುಮಾನ ಇಲ್ಲದೆ ದೂರು ದಾಖಲಿಸಲು ಸಾಧ್ಯವೇ? ಈ ವಿಚಾರವಾಗಿ ತನಿಖೆ ಸರಿಯಾಗಿ ಆಗುತ್ತದೆಯಾ? ಇವರು ಅಕ್ರಮದ ಅಂಗಡಿ ತೆರೆದಿದ್ದ ಕಾರಣ ಜನ ಅವರ ಬಳಿ ಖರೀದಿಗೆ ಹೋಗಿದ್ದಾರೆ. ಇವರು ಅಂಗಡಿ ತೆರೆಯದಿದ್ದರೆ ಅವರು ಹೋಗುತ್ತಿದ್ದರಾ? ಅಂಗಡಿ ತೆರೆದವರು ಯಾರು? ಸಂಪರ್ಕ ಕೊಟ್ಟವರಾರು? ಈ ಪ್ರಕರಣದಲ್ಲಿ ಪೊಲೀಸರು, ರಾಜಕಾರಣಿಗಳು ಯಾವ ರೀತಿ ಭಾಗಿಯಾಗಿದ್ದಾರೆ? ಯಾರು ಆಸ್ತಿ ಮಾಡಿದ್ದಾರೆ? ಯಾರು ಸಾಲ ಮಾಡಿದ್ದಾರೆ? ಇವೆಲ್ಲವೂ ಬಹಿರಂಗವಾಗಬೇಕು ಅಲ್ಲವೇ? ಇದ್ಯಾವುದೂ ನಡೆಯದೇ ಏಕಾಏಕಿ ಪರೀಕ್ಷೆ ರದ್ದು ಮಾಡಿ, ಮರು ಪರೀಕ್ಷೆಗೆ ಆದೇಶಿಸಿದರೆ ನಾವು ಸುಮ್ಮನಿರಲು ಸಾಧ್ಯವೇ? ಅಕ್ರಮದಲ್ಲಿ ಯಾರು ಭಾಗಿಯಾಗಿದ್ದಾರೆ, ಯಾರು ಯಾರಿಂದ ವಸೂಲಿ ಮಾಡಿದ್ದಾರೆ? ಎಂಬುದು ಬಹಿರಂಗವಾಗಬೇಕು. ಮಾಗಡಿ ಕ್ಷೇತ್ರವೊಂದರಲ್ಲಿ ಎರಡು ಕೋಟಿ ರೂ. ಅಕ್ರಮ ನಡೆದಿದ್ದು ಇದರಲ್ಲಿ ಭಾಗಿಯಾಗಿರುವ ಸಚಿವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಪಕ್ಷ ಇದರ ಬಗ್ಗೆ ಹೋರಾಟ ಮಾಡುತ್ತದೆ. ಈ ವಿಚಾರವಾಗಿ ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ನಮ್ಮ ಪಕ್ಷದ ವಕ್ತಾರರು ಸಿದ್ಧರಿದ್ದಾರೆ’ ಎಂದರು. ಸಿಎಂ ಬದಲಾವಣೆ ವಿಚಾರವಾಗಿ ಯತ್ನಾಳ್ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಯತ್ನಾಳ್ ಅವರಾಗಲಿ ಅಥವಾ ಬೇರೆ ಯಾರೇ ಮಾತನಾಡಿದರು ಅದು ನಮಗೆ ಪ್ರಮುಖ ವಿಚಾರವಲ್ಲ. ಸಮರ್ಥರು, ಅಸಮರ್ಥರು, ಯಾವ ಸೂತ್ರ ಬರುತ್ತದೆ ಎಂಬುದೂ ನಮಗೆ ಮುಖ್ಯವಲ್ಲ. ಮುಖ್ಯಮಂತ್ರಿ ಬದಲಾವಣೆ ಅವರ ಪಕ್ಷದ ವಿಚಾರ. ನಮಗೂ ಅದಕ್ಕೂ ಸಂಬಂಧವಿಲ್ಲ. ರಾಜ್ಯಕ್ಕೆ ಉತ್ತಮ ಆಡಳಿತ ಸಿಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಉದ್ದೇಶ. ಈ ರಾಜ್ಯ ಶಾಂತಿಯ ತೋಟವಾಗಬೇಕು, ಎಲ್ಲಾ ಧರ್ಮದವರಿಗೂ ರಕ್ಷಣೆ ಸಿಗಬೇಕು. ಸರ್ಕಾರ ಈ ಕೆಲಸ ಮಾಡಿದರೆ ಸಾಕು.
ಸ್ವಚ್ಛ ಮಾಡೋದು ಎಂದರೆ ಇದೇನಾ?
ಮಾಧ್ಯಮಗಳಲ್ಲಿ ಭ್ರಷ್ಟಾಚಾರ ವಿಚಾರ ಪ್ರಕಟವಾಗುತ್ತಿದ್ದರೂ, ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ. ವಿಚಾರಣೆಗೆ ಕರೆಸಿದ ದರ್ಶನ್ ಗೌಡ ಯಾವ ಹೇಳಿಕೆ ಕೊಟ್ಟಿದ್ದಾನೆ? ಆತನನ್ನು ಯಾಕೆ ಪೂರ್ಣಪ್ರಮಾಣದಲ್ಲಿ ವಿಚಾರಣೆ ಮಾಡದೆ ಬಿಟ್ಟು ಕಳುಹಿಸಲಾಯಿತು? ಈ ವಿಚಾರವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ ಯಾಕೆ? ಆತನ ವಿಚಾರಣೆ ಮಾಡಿದರೆ ಸಚಿವರ ಸಂಪರ್ಕ ಬಹಿರಂಗವಾಗುತ್ತದೆ ಎಂಬ ಕಾರಣಕ್ಕೆ ಆತನನ್ನು ಬಿಟ್ಟು ಕಳುಹಿಸಲಾಗಿದೆ. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ? ರಾಮನಗರ ಸ್ವಚ್ಛ ಮಾಡುತ್ತೇನೆ ಎಂದು ಬಂದವರು ಮಾಡಿದ ಸ್ವಚ್ಛ ಇದೇನಾ?’ ಎಂದು ಪ್ರಶ್ನಿಸಿದರು. ಪಕ್ಷದ ರಾಷ್ಟ್ರೀಯ ನಾಯಕರಾದ ಶ್ರೀಮತಿ ಮೀರಾ ಕುಮಾರ್ ಅವರು ಮೈಸೂರಿನಲ್ಲಿ ಬಾಬು ಜಗಜೀವನ್ ರಾಮ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ನಮ್ಮ ಹಿರಿಯ ನಾಯಕರ ಅನುಭವ, ಅವರ ವಿಚಾರ, ಅವರ ಮಾರ್ಗದರ್ಶನ ನಮಗೆ ಅವಶ್ಯಕತೆಯಿದ್ದು, ನಾನು ಹಾಗೂ ನಮ್ಮ ನಾಯಕರು ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ.
ಬಿಜೆಪಿ ಆಂತರಿಕ ವಿಚಾರ ನಮಗೆ ಬೇಡ
ಮುಂದಿನ ಎರಡು ಮೂರು ದಿನಗಳಲ್ಲಿ ಬಾರಿ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಡಿಯೂರಪ್ಪನವರು ನಿನ್ನೆ ಒಂದು ಹೇಳಿಕೆ ನೀಡಿದ್ದು, ಯತ್ನಾಳ್ ಅವರು ಒಂದು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಭೋಜನಕೂಟ ಇದೆ. ಇದೆಲ್ಲವೂ ಅವರ ಪಕ್ಷದ ವಿಚಾರಗಳು. ಅವರ ಪಕ್ಷದ ವಿಚಾರದ ಬಗ್ಗೆ ನಾವ್ಯಾಕೆ ಮಾತನಾಡಬೇಕು. ಅವರನ್ನು ಪ್ರಶಂಸಿಸಲು, ಅವರಿಗೆ ಸಲಹೆ ನೀಡಲು, ಅವರನ್ನು ತೆಗಳಲು ನಾವಿಲ್ಲ’ ಎಂದು ಉತ್ತರಿಸಿದರು. ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಪದೇಪದೇ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈಗ ಆ ವಿಚಾರಗಳ ಬಗ್ಗೆ ಚರ್ಚೆ ಬೇಡ. ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಿಕೊಂಡು ನಂತರ ಚರ್ಚೆ ಮಾಡೋಣ’ ಎಂದು ತಿಳಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತರಿಗೆ ನೀಡುವ ಅನುದಾನ ಕಡಿತ, ದಲಿತರ ಯೋಜನೆಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ದಲಿತರಿಗೆ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡಬೇಕು ಎಂದು ಕಾನೂನು ಜಾರಿಗೆ ತರಲಾಗಿತ್ತು. ಅದರ ಆಧಾರದ ಮೇಲೆ ಅನುದಾನ ಹಂಚಿಕೆ ಮಾಡಿ ಅದನ್ನು ಬೇರೆ ಯೋಜನೆಗಳಿಗೆ ಬಳಸುವಂತಿಲ್ಲ ಎಂದು ಸೂಚಿಸಲಾಗಿತ್ತು. ಬಿಜೆಪಿ ಜನ ಹಾಗೂ ದಲಿತ ವಿರೋಧಿ ಪಕ್ಷ. ದಲಿತರಿಗೆ, ಅವರ ಯೋಜನೆಗಳಿಗೆ ಸಿಗಬೇಕಾದ ಅನುದಾನವನ್ನು ತೆಗೆದು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ದಲಿತರು ತಮಗೆ ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ನಿರ್ಲಕ್ಷಿಸುತ್ತಿದ್ದಾರೆ. ಕೇವಲ ರಾಜಕಾರಣಕ್ಕೆ ಬಿಜೆಪಿ ದಲಿತರನ್ನು ಬಳಸಿಕೊಳ್ಳುತ್ತಿದೆ’ ಎಂದರು. ಮೇಕೆದಾಟು ಯೋಜನೆಗೆ ಬಜೆಟ್ ನಲ್ಲಿ 1000 ಕೋಟಿ ಅನುದಾನ ಘೋಷಣೆ ಮಾಡಿದ್ದು ಅದನ್ನು ಯಾವ ರೀತಿ ಅನುಷ್ಠಾನ ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಖ್ಯಮಂತ್ರಿಗಳು ದೆಹಲಿಯಿಂದ ಅನುಮತಿ ಪಡೆದು ಯೋಜನೆ ಆರಂಭಿಸುವುದಾಗಿ ಹೇಳಿದ್ದಾರೆ. ಅವರು ಈ ನಿಟ್ಟಿನಲ್ಲಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ’ ಎಂದು ಉತ್ತರಿಸಿದರು.